ADVERTISEMENT

ಕೇಂದ್ರ ಸರ್ಕಾರದಿಂದ ತಮ್ಮ ವಿರುದ್ಧ ಪ್ರತೀಕಾರ: ವಾದ್ರಾ ಆರೋಪ

ತಮ್ಮ ತಾಯಿಗೆ ವಿಚಾರಣೆ ನೆಪದಲ್ಲಿ ಹಿಂಸೆಗೆ ಫೇಸ್‌ಬುಕ್‌ನಲ್ಲಿ ಆಕ್ರೋಶ

ಪಿಟಿಐ
Published 13 ಫೆಬ್ರುವರಿ 2019, 1:18 IST
Last Updated 13 ಫೆಬ್ರುವರಿ 2019, 1:18 IST
ತಾಯಿ ಮೌರೀನ್, ಪತ್ನಿ ಪ್ರಿಯಾಂಕಾ ಗಾಂಧಿ ಜೊತೆ ಜಾರಿ ನಿರ್ದೇಶನಾಲಯದ ಕಚೇರಿಗೆ ಬಂದ ರಾಬರ್ಟ್ ವಾದ್ರಾ –ಪಿಟಿಐ ಚಿತ್ರ
ತಾಯಿ ಮೌರೀನ್, ಪತ್ನಿ ಪ್ರಿಯಾಂಕಾ ಗಾಂಧಿ ಜೊತೆ ಜಾರಿ ನಿರ್ದೇಶನಾಲಯದ ಕಚೇರಿಗೆ ಬಂದ ರಾಬರ್ಟ್ ವಾದ್ರಾ –ಪಿಟಿಐ ಚಿತ್ರ   

ನವದೆಹಲಿ: ಚುನಾವಣೆಯು ಸಮೀಪಿಸುತ್ತಿರುವ ಹೊತ್ತಿನಲ್ಲಿ ಕೇಂದ್ರ ಸರ್ಕಾರ ತಮ್ಮ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತಿದೆ ಎಂದು ರಾಬರ್ಟ್ ವಾದ್ರಾ ಆರೋಪಿಸಿದ್ದಾರೆ.ವಿವಿಧ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ಅವರು, ತಮ್ಮ ತಾಯಿಯನ್ನು ವಿಚಾರಣೆ ನೆಪದಲ್ಲಿ ಹಿಂಸಿಸಲಾಗುತ್ತಿದೆ ಎಂದಿದ್ದಾರೆ.

4 ವರ್ಷ ಎಂಟು ತಿಂಗಳ ಕಾಲ ತಮ್ಮನ್ನು ವಿಚಾರಣೆ ನಡೆಸದೇ ಸುಮ್ಮನಿದ್ದಿದ್ದು ಏಕೆ ಎಂದು ಪ್ರಶ್ನಿಸಿರುವ ಅವರು,‘ಇದು ಚುನಾವಣಾ ಗಿಮಿಕ್ ಅಲ್ಲ ಎಂದು ಭಾರತೀಯರಿಗೆತಿಳಿಯುವುದಿಲ್ಲವೇ’ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಬಿಕಾನೇರ್ ಭೂ ಹಗರಣ ಸಂಬಂಧ ವಾದ್ರಾ ಹಾಗೂ ಅವರ ತಾಯಿ ಮೌರೀನ್ ಅವರು ಜೈಪುರದ ಜಾರಿ ನಿರ್ದೇಶನಾಲಯದ ಪ್ರಾದೇಶಿಕ ಕಚೇರಿಯಲ್ಲಿ ಮಂಗಳವಾರ ವಿಚಾರಣೆಗೆ ಹಾಜರಾದರು. ವಾದ್ರಾ ಜೊತೆ ಪತ್ನಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇದ್ದರು.

ADVERTISEMENT

‘75 ವರ್ಷದ ನನ್ನ ತಾಯಿಯು ಅಪಘಾತದಲ್ಲಿ ಮಗಳನ್ನು ಕಳೆದುಕೊಂಡರು. ಮಧುಮೇಹದಿಂದ ಬಳಲುತ್ತಿದ್ದ ಮಗ ಹಾಗೂ ಪತಿಯನ್ನೂ ಕಳೆದುಕೊಂಡರು. ಮೂರು ಸಾವುಗಳಿಂದ ನೊಂದಿದ್ದ ಅವರಿಗೆ ನನ್ನ ಕಚೇರಿಯಲ್ಲೇ ಇರುವಂತೆ ಕೇಳಿಕೊಂಡಿದ್ದೆ. ಕಚೇರಿಯಲ್ಲಿಯೇ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಾ, ಇಬ್ಬರೂ ದುಃಖ ಹಂಚಿಕೊಳ್ಳುತ್ತಿದ್ದೆವು’ ಎಂದು ವಾದ್ರಾ ಫೇಸ್‌ಬುಕ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ನನ್ನ ಜೊತೆ ಕಚೇರಿಯಲ್ಲಿ ಇದ್ದ ಕಾರಣಕ್ಕಾಗಿ ನನ್ನ ತಾಯಿಯನ್ನೂ ಆರೋಪಿಯನ್ನಾಗಿ ಮಾಡಿ, ವಿಚಾರಣೆ ಮಾಡಲಾಗುತ್ತಿದೆ’ ಎಂದು ವಾದ್ರಾ ಆರೋಪಿಸಿದ್ದಾರೆ.

‘ನಾನು ಶಿಸ್ತುಬದ್ಧ ವ್ಯಕ್ತಿ. ಮುಚ್ಚಿಡುವಂತಹದ್ದು ಏನೂ ಇಲ್ಲ. ಎಷ್ಟು ಗಂಟೆ ಬೇಕಾದರೂ ವಿಚಾರಣೆ ಎದುರಿಸಿ, ಪ್ರತಿಯೊಂದು ಪ್ರಶ್ನೆಗೂ ಗೌರವಯುತವಾಗಿ ಉತ್ತರಿಸಬಲ್ಲೆ. ಈ ವಿಚಾರಣೆಯಿಂದ ನನಗೆ ಇನ್ನಷ್ಟು ಬಲ ಬರುತ್ತದೆ. ದೇವರು ನಮ್ಮೊಂದಿಗಿದ್ದಾನೆ’ ಎಂದು ಹೇಳಿದ್ದಾರೆ.

ಬಿಕಾನೇರ್ ಭೂ ಹಗರಣದ ಜೊತೆ ಮತ್ತೆರೆಡು ಪ್ರಕರಣಗಳಲ್ಲೂ ವಾದ್ರಾ ಅವರು ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿದ್ದಾರೆ.ವಿದೇಶದಲ್ಲಿ ಆಸ್ತಿ ಮಾಡಿರುವ ಆರೋಪದ ಮೇಲೆ ದೆಹಲಿಯಲ್ಲಿ ಮೂರು ದಿನ ಅವರನ್ನು ಪ್ರಶ್ನಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.