ADVERTISEMENT

ಗುಡಗೇರಿ ಪೊಲೀಸ್ ಠಾಣೆಗೆ ಶ್ರೇಷ್ಠತೆಯ ಗರಿ; ರಾಷ್ಟ್ರದಲ್ಲಿ 5ನೇ ಸ್ಥಾನ

ಶೇ 100ರಷ್ಟು ಪ್ರಕರಣ ಇತ್ಯರ್ಥಪಡಿಸಿದ ಹೆಗ್ಗಳಿಕೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 19:49 IST
Last Updated 25 ಜೂನ್ 2019, 19:49 IST
ಗುಡಗೇರಿ ಪೊಲೀಸ್ ಠಾಣೆ
ಗುಡಗೇರಿ ಪೊಲೀಸ್ ಠಾಣೆ   

ನವದೆಹಲಿ: ದೇಶದ ಐದು ಅತ್ಯುತ್ತಮ ಪೊಲೀಸ್‌ ಠಾಣೆಗಳಲ್ಲಿ ಧಾರವಾಡದ ಗುಡಗೇರಿಯ ಠಾಣೆಯೂ ಸ್ಥಾನ ಪಡೆದಿದೆ. ಶೇಕಡಾ ನೂರರಷ್ಟು ಅಪರಾಧ ಪ್ರಕರಣಗಳನ್ನು ಇತ್ಯರ್ಥಪಡಿಸಿದ ಹೆಗ್ಗಳಿಕೆ ಈ ಠಾಣೆಗಿದೆ.

ಮೂಲಸೌಕರ್ಯ ಹಾಗೂ ನಾಗರಿಕರ ಪ್ರತಿಕ್ರಿಯೆ ವಿಚಾರದಲ್ಲಿ ಕೊಂಚ ಹಿನ್ನಡೆಯಾಗಿದ್ದರಿಂದ ಠಾಣೆಯ ರ‍್ಯಾಂಕಿಂಗ್ ಕಡಿಮೆಯಾಗಿದೆ ಎಂದುಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ‘ಪೊಲೀಸ್ ಠಾಣೆಗಳ ರ‍್ಯಾಂಕಿಂಗ್–2018’ ವರದಿ ಅಭಿಪ್ರಾಯಪಟ್ಟಿದೆ.

ರ‍್ಯಾಂಕಿಂಗ್ ಪಟ್ಟಿಯು ಕಳೆದ ಡಿಸೆಂಬರ್‌ನಲ್ಲೇ ಪ್ರಕಟಗೊಂಡಿತ್ತು. ಆದರೆ ಠಾಣೆಗಳ ಕಾರ್ಯಕ್ಷಮತೆ, ಮೂಲಸೌಕರ್ಯ ಮೊದಲಾದ ವಿಸ್ತೃತ ಮಾಹಿತಿ ಒಳಗೊಂಡ ವರದಿಯು ಇದೀಗ ಬಹಿರಂಗವಾಗಿದೆ.

ADVERTISEMENT

ಅಪರಾಧ ತಡೆ, ಪತ್ತೆಹಚ್ಚುವಿಕೆ, ಪ್ರಕರಣಗಳ ವಿಲೇವಾರಿ, ಸಮುದಾಯ ಪೊಲೀಸ್ ವ್ಯವಸ್ಥೆ ಮತ್ತು ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ವಿಚಾರದಲ್ಲಿ ಗುಡಗೇರಿ ಠಾಣೆ ಅತ್ಯುತ್ತಮ ಕೆಲಸ ಮಾಡಿದ ಕಾರಣ ಒಟ್ಟಾರೆರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನ ಪಡೆದಿದೆ. ಕಾರ್ಯಕ್ಷಮತೆ ವಿಚಾರದಲ್ಲಿ 4ನೇ ಸ್ಥಾನ ಪಡೆದಿದೆ.

2017ರಲ್ಲಿ ದಾಖಲಾದ ಎಲ್ಲ 82 ಪ್ರಕರಣ ವಿಲೇವಾರಿಯಾಗಿದ್ದವು. 2018ರಲ್ಲಿ 101ರ ಪೈಕಿ 91ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು ಎಂದು ಇನ್ಸ್‌ಪೆಕ್ಟರ್ ನವೀನ್ ಜಕ್ಕಲಿ ತಿಳಿಸಿದ್ದಾರೆ.

ದೌರ್ಜನ್ಯ, ಆಸ್ತಿ ವ್ಯಾಜ್ಯ ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅಂಶಗಳನ್ನು ಮಾನದಂಡವಾಗಿಟ್ಟುಕೊಂಡು ಠಾಣೆಗಳ ಪಟ್ಟಿ ತಯಾರಿಸಲಾಗಿತ್ತು.

ಗುಡಗೇರಿ ಮಾತ್ರವಲ್ಲದೇ ರಾಜ್ಯದ ಇತರ ಮೂರು ಠಾಣೆಗಳು ಈ ಪಟ್ಟಿಯಲ್ಲಿ ಗಮನ ಸೆಳೆದಿವೆ. ಗದಗ (ಸಂಚಾರ ಠಾಣೆ), ಕೊಡಗಿನ ಸೋಮವಾರಪೇಟೆ ಹಾಗೂ ಮೈಸೂರಿನ ಸಾಲಿಗ್ರಾಮ ಠಾಣೆಗಳು ಈ ಪಟ್ಟಿಯಲ್ಲಿವೆ.ಈ ಪೈಕಿ ಸಾಲಿಗ್ರಾಮ ಠಾಣೆ ಮೂಲಸೌಕರ್ಯವಿಚಾರದಲ್ಲಿ ಉತ್ತಮ ರ‍್ಯಾಂಕ್ ಪಡೆದಿದೆ.

ಠಾಣೆಯ ಮಾದರಿ ಕ್ರಮ

ಅಪರಾಧಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ 21 ಹಳ್ಳಿಗಳಿಗೆ ಒಬ್ಬ ಕಾನ್‌ಸ್ಟೆಬಲ್‌ ಅವರನ್ನು ಗುಡಗೇರಿ ಠಾಣಾಧಿಕಾರಿ ನಿಯೋಜಿಸಿದ್ದರು. ತಿಂಗಳಲ್ಲಿ ನಾಲ್ಕು ಬಾರಿ ಗ್ರಾಮಕ್ಕೆ ಭೇಟಿ ನೀಡುತ್ತಿದ್ದ ಅವರು, ಹಳ್ಳಿಗರ ಜತೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸುತ್ತಿದ್ದರು.

ಪ್ರತೀ ಗ್ರಾಮದಲ್ಲಿಯೂ ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ಮಾಡಲಾಗಿತ್ತು. ಗ್ರಾಮಸ್ಥರು ಠಾಣೆಗೆ ಭೇಟಿ ನೀಡುವ ಬದಲು ವಾಟ್ಸ್‌ಆ್ಯಪ್‌ನಲ್ಲಿಯೇ ತಮ್ಮ ಸಮಸ್ಯೆ ಹೇಳಿಕೊಳ್ಳಲು ಅವಕಾಶ ನೀಡಲಾಗಿತ್ತು. ಇಂತಹ ಕೆಲವು ಕ್ರಮಗಳು ಅಪರಾಧ ಚಟುವಟಿಕೆ ನಿಯಂತ್ರಣದಲ್ಲಿ ಸಹಕಾರಿಯಾದವು.

ಗಮನ ಸೆಳೆದ ರಾಜ್ಯದ ಇತರೆ 3 ಠಾಣೆಗಳು

ಗುಡಗೇರಿ ಮಾತ್ರವಲ್ಲದೇ ರಾಜ್ಯದ ಇತರ ಮೂರು ಠಾಣೆಗಳು ಈ ಪಟ್ಟಿಯಲ್ಲಿ ಗಮನ ಸೆಳೆದಿವೆ. ಗದಗ (ಸಂಚಾರ ಠಾಣೆ), ಕೊಡಗಿನ ಸೋಮವಾರಪೇಟೆ ಹಾಗೂ ಮೈಸೂರಿನ ಸಾಲಿಗ್ರಾಮ ಠಾಣೆಗಳು ಈ ಪಟ್ಟಿಯಲ್ಲಿವೆ.

ಈ ಪೈಕಿ ಸಾಲಿಗ್ರಾಮ ಠಾಣೆಯು ಮೂಲಸೌಕರ್ಯ ಮತ್ತು ನಾಗರಿಕರ ಪ್ರತಿಕ್ರಿಯೆ ವಿಚಾರದಲ್ಲಿ ಉತ್ತಮ ರ‍್ಯಾಂಕಿಂಗ್ ಪಡೆದಿರುವ ರಾಜ್ಯದ ಏಕೈಕ ಠಾಣೆ ಎನಿಸಿದೆ.

**

ಗದಗ ಟ್ರಾಫಿಕ್ ಠಾಣೆ: (ರ‍್ಯಾಂಕಿಂಗ್)

ಒಟ್ಟಾರೆ : 11

ಕಾರ್ಯಕ್ಷಮತೆ: 10

ಮೂಲಸೌಕರ್ಯ, ನಾಗರಿಕರ ಪ್ರತಿಕ್ರಿಯೆ: 56
**

ಸೋಮವಾರಪೇಟೆ ಠಾಣೆ: (ರ‍್ಯಾಂಕಿಂಗ್)

ಒಟ್ಟಾರೆ: 42

ಕಾರ್ಯಕ್ಷಮತೆ: 41

ಮೂಲಸೌಕರ್ಯ, ನಾಗರಿಕರ ಪ್ರತಿಕ್ರಿಯೆ: 61
***

ಸಾಲಿಗ್ರಾಮ ಠಾಣೆ: (ರ‍್ಯಾಂಕಿಂಗ್)

ಒಟ್ಟಾರೆ: 65

ಕಾರ್ಯಕ್ಷಮತೆ: 63

ಮೂಲಸೌಕರ್ಯ, ನಾಗರಿಕರ ಪ್ರತಿಕ್ರಿಯೆ: 45

**
ದೇಶದ ಅತ್ಯುತ್ತಮ ಪೊಲೀಸ್ ಠಾಣೆಗಳು

ಕಾಲೂ–ರಾಜಸ್ಥಾನ

ಕ್ಯಾಂಪ್‌ಬೆಲ್ ಬೇ–ಅಂಡಮಾನ್ ನಿಕೋಬಾರ್

ಫರಕ್ಕಾ–ಪಶ್ಚಿಮ ಬಂಗಾಳ

ಗುಡಿಗೇರಿ–ಕರ್ನಾಟಕ

**

ಗ್ರಾಮೀಣ ಭಾಗದಲ್ಲಿ ಹೆಚ್ಚು ಕಾರ್ಯಕ್ಷಮತೆಯಿಂದ ಕೆಲಸ ಮಾಡಲು ಪೊಲೀಸ್ ಅಧಿಕಾರಿಗಳಿಗೆ ಈ ವರದಿ ಪ್ರೇರಣೆ ನೀಡಿದೆ
- ರಾಘವೇಂದ್ರ ಸುಹಾಸ್, ಐಜಿಪಿ, ಉತ್ತರ ವಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.