ADVERTISEMENT

ಋತುಸ್ರಾವ ಪರೀಕ್ಷಿಸಲು 68 ವಿದ್ಯಾರ್ಥಿನಿಯರ ಒಳಉಡುಪು ತೆಗೆಸಿದ ಕಾಲೇಜು!

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 18:04 IST
Last Updated 14 ಫೆಬ್ರುವರಿ 2020, 18:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್‌: ಋತುಸ್ರಾವವಾಗಿಲ್ಲ ಎಂಬುದನ್ನು ಖಚಿತಪಡಿಸಲು 68 ವಿದ್ಯಾರ್ಥಿನಿಯರನ್ನು ಶೌಚಾಲಯಕ್ಕೆ ಕರೆದೊಯ್ದು ಬಲವಂತವಾಗಿ ಒಳಉಡುಪುಗಳನ್ನು ತೆಗೆಸಿ ಪರೀಕ್ಷಿಸಿದ ಘಟನೆ ಇಲ್ಲಿನ ಕಛ್‌ ಜಿಲ್ಲೆಯ ಭುಜ್‌ ನಗರದ ವಸತಿ ಶಾಲೆಯೊಂದರಲ್ಲಿ ನಡೆದಿದೆ.

ಶ್ರೀ ಸಹಜಾನಂದ್‌ ಗರ್ಲ್ಸ್‌ ಇನ್‌ಸ್ಟಿಟ್ಯೂಟ್‌ ಹೆಸರಿನ ಈಶಾಲೆಯನ್ನು ಧಾರ್ಮಿಕ ಸಂಸ್ಥೆಯೊಂದು ನಡೆಸುತ್ತಿದೆ.

‘ನಮ್ಮನ್ನು ಶೌಚಾಲಯಕ್ಕೆ ಕರೆದೊಯ್ದು ಪ್ರಾಂಶುಪಾಲೆ ಸೇರಿದಂತೆ ನಾಲ್ವರು, ಶಿಕ್ಷಕಿಯರ ಎದುರು ಒಬ್ಬರ ಬಳಿಕ ಒಬ್ಬರ ಒಳಉಡುಪುಗಳನ್ನು ತೆಗೆಸಿದರು’ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಸೋಮವಾರ ಇದು ನಡೆದಿದೆ ಎನ್ನಲಾಗಿದ್ದು, ಪ್ರತಿಭಟಿಸಲು ಉದ್ದೇಶಿಸಿದ್ದ ಸಂತ್ರಸ್ತರಿಗೆ ಕಾಲೇಜು ಮಂಡಳಿ ಬೆದರಿಕೆ ಹಾಕಿ, ಪ್ರತಿಭಟನೆ ನಡೆಸಿದರೆ ಹಾಸ್ಟೆಲ್‌ನಿಂದ ಉಚ್ಚಾಟಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ADVERTISEMENT

‘ಘಟನೆ ಕುರಿತು ಕಾನೂನು ಕ್ರಮಕ್ಕೆ ಆಗ್ರಹಿಸಿದರೆ ನಮ್ಮನ್ನು ಹಾಸ್ಟೆಲ್‌ನಿಂದ ಉಚ್ಚಾಟಿಸುವ ಬೆದರಿಕೆ ಹಾಕಿದ್ದಾರೆ. ಶಿಕ್ಷಕಿಯರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಮಂಡಳಿ ನಮಗೇ ಬೆದರಿಕೆ ಹಾಕಿದೆ. ಮೂರ್ನಾಲ್ಕು ದಿನಗಳಿಂದ ನಮಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ’ ಎಂದು ವಿದ್ಯಾರ್ಥಿನಿಯರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಪರೀಕ್ಷಿಸಿದ್ದು ಏಕೆ?: ಶಿಕ್ಷಣ ಸಂಸ್ಥೆಯ ಆವರಣದ ಉದ್ಯಾನದಲ್ಲಿ ಸೋಮವಾರ ಸ್ಯಾನಿಟರಿ ಪ್ಯಾಡ್‌ ಕಂಡುಬಂದ ಕಾರಣ ಕಾಲೇಜು ಮಂಡಳಿಯು ವಿದ್ಯಾರ್ಥಿನಿಯರ ಪರೀಕ್ಷೆಗೆ ಮುಂದಾಗಿತ್ತು ಎಂದು ವರದಿಯಾಗಿದೆ.

‘ಮುಟ್ಟಿನ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಕಾಲೇಜಿನ ಅಡುಗೆ ಕೋಣೆ, ಆವರಣದಲ್ಲಿರುವ ದೇವಸ್ಥಾನಕ್ಕೆ ಪ್ರವೇಶಿಸುವಂತಿಲ್ಲ. ಜೊತೆಗೆ ಇತರೆ ವಿದ್ಯಾರ್ಥಿಗಳ ಜೊತೆಗೂ ಬೆರೆಯುವಂತಿಲ್ಲ ಎಂಬ ನಿಯಮ ಕಾಲೇಜಿನಲ್ಲಿ ಇದೆ. ಹೀಗಾಗಿಪ್ಯಾಡ್‌ ಎಸೆದ ವಿದ್ಯಾರ್ಥಿನಿಯನ್ನು ಗುರುತಿಸಲು ಈ ರೀತಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ. ವಿದ್ಯಾರ್ಥಿನಿಯರಿಗೆ ಈ ರೀತಿ ಕಿರುಕುಳ ನೀಡಿರುವುದಕ್ಕೆ ಪೋಷಕರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನಿಖೆಗೆ ಸಮಿತಿ ರಚನೆ

ನವದೆಹಲಿ (ಪಿಟಿಐ): ಈ ಘಟನೆ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ಮಹಿಳಾ ಆಯೋಗವು (ಎನ್‌ಸಿಡಬ್ಲ್ಯು) ಸಮಿತಿ ರಚಿಸಿದೆ. ಸಮಿತಿ ಸದಸ್ಯರು ವಿದ್ಯಾರ್ಥಿನಿಯರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ಸಹ್‌ಜಾನಂದ್‌ ಗರ್ಲ್ಸ್‌ ಇನ್‌ಸ್ಟಿಟ್ಯೂಟ್‌ ಕಾಲೇಜಿನ ಟ್ರಸ್ಟಿ ಪ್ರವೀಣ್‌ ಪಿಂಡೊರಾ ಹಾಗೂ ಕಾಲೇಜು ಪ್ರಾಂಶುಪಾಲೆ ರಿಟಾ ರಾಣಿಗ ಅವರಿಂದಲೂ ವಿವರಣೆ ಕೇಳಲಾಗಿದೆ ಎಂದು ಎನ್‌ಸಿಡಬ್ಲ್ಯು ಪ್ರಕಟಣೆಯಲ್ಲಿ ತಿಳಿಸಿದೆ.

ಘಟನೆ ಬಗ್ಗೆ ತಕ್ಷಣವೇ ಪರಿಶೀಲಿಸಿ ವರದಿ ನೀಡಲು ಕಛ್‌ ವಿಶ್ವವಿದ್ಯಾಲಯದ ಉಸ್ತುವಾರಿ ಕುಲಪತಿ ದರ್ಶನ್‌ ಡೊಲಾಕಿಯಾ ಹಾಗೂ ಗುಜರಾತ್‌ ಡಿಜಿಪಿಗೆ ಸೂಚಿಸಲಾಗಿದೆ ಎಂದು ಎನ್‌ಸಿಡಬ್ಲ್ಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.