ADVERTISEMENT

ಕೋವಿಡ್ ಭೀತಿ: ಪುತ್ರನೊಂದಿಗೆ 3 ವರ್ಷ ಗೃಹಬಂಧನದಲ್ಲಿದ್ದ ತಾಯಿ!

ಹರಿಯಾಣ: ಪೊಲೀಸರ ಸಹಾಯದಿಂದ ಪತ್ನಿ– ಪುತ್ರನನ್ನು ಹೊರಗೆ ತಂದ ಪತಿ

ಪಿಟಿಐ
Published 22 ಫೆಬ್ರುವರಿ 2023, 14:54 IST
Last Updated 22 ಫೆಬ್ರುವರಿ 2023, 14:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುರುಗ್ರಾಮ್ (ಹರಿಯಾಣ): ಕೋವಿಡ್‌–19 ಸಾಂಕ್ರಾಮಿಕ ರೋಗದ ಭೀತಿಯಿಂದಾಗಿ ಇಲ್ಲಿನ ಚಕ್ಕರ್‌ಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಮೂರು ವರ್ಷಗಳ ಕಾಲ ಸ್ವಯಂ ಗೃಹಬಂಧನದಲ್ಲಿದ್ದ ಮಹಿಳೆ ಮತ್ತು ಆಕೆಯ 10 ವರ್ಷದ ಪುತ್ರನನ್ನು ಮಂಗಳವಾರ ತಂಡವೊಂದು ಹೊರಗೆ ಕರೆ ತಂದಿದೆ ಎಂದು ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ತಂಡ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸದಸ್ಯರು ಒಟ್ಟಾಗಿ ಮನೆಯ ಮುಂಬಾಗಿಲನ್ನು ಮುರಿದು 33 ವರ್ಷದ ಮುನ್‌ಮುನ್ ಮಾಝಿ ಹಾಗೂ ಆಕೆಯ 10 ವರ್ಷದ ಮಗನನ್ನು ರಕ್ಷಿಸಿದ್ದಾರೆ.

‘ಮಹಿಳೆಗೆ ಕೆಲವು ಮಾನಸಿಕ ಸಮಸ್ಯೆಗಳಿವೆ. ಇಬ್ಬರನ್ನೂ ರೋಹ್‌ಟಕ್‌ನ ಪಿಜಿಐ ಆಸ್ಪತ್ರೆಯ ಮಾನಸಿಕ ವಾರ್ಡ್‌ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ’ ಎಂದು ಗುರುಗ್ರಾಮ್‌ನ ತಜ್ಞವೈದ್ಯ ಡಾ. ವೀರೇಂದ್ರ ಯಾದವ್ ತಿಳಿಸಿದ್ದಾರೆ.

ADVERTISEMENT

ಮುನ್‌ಮುನ್ ಅವರ ಪತಿ ಸುಜನ್ ಮಾಝಿ ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿದ್ದು, ಅವರು ಚಕ್ಕರ್‌ಪುರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಪ್ರವೀಣ್‌ ಕುಮಾರ್ ಅವರನ್ನು ಫೆ. 17ರಂದು ಸಂಪರ್ಕಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

‘2020ರಲ್ಲಿ ಮೊದಲ ಲಾಕ್‌ಡೌನ್‌ನ ನಿರ್ಬಂಧಗಳು ಸಡಿಲಗೊಂಡಾಗ ಸುಜನ್ ಕಚೇರಿಗೆ ಭೌತಿಕವಾಗಿ ತೆರಳುತ್ತಿದ್ದರು. ಈ ವೇಳೆ ಪತಿಯನ್ನೂ ಮನೆಯೊಳಗೆ ಸೇರಿಸದ ಮುನ್‌ಮುನ್ 3 ವರ್ಷಗಳ ಕಾಲ ಮಗನೊಂದಿಗೆ ಸ್ವಯಂ ಗೃಹಬಂಧನ ವಿಧಿಸಿಕೊಂಡಿದ್ದರು. ಆರಂಭದ ಕೆಲ ದಿನಗಳ ಕಾಲ ಸುಜನ್, ಸ್ನೇಹಿತರು ಮತ್ತು ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಹೆಂಡತಿಯ ಮನವೊಲಿಸಲು ವಿಫಲವಾದ ಬಳಿಕ ಚಕ್ಕರ್‌ಪುರದಲ್ಲೇ ಮತ್ತೊಂದು ಮನೆಯನ್ನು ಬಾಡಿಗೆ ಪಡೆದು ವಾಸಿಸತೊಡಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೊಕಾಲ್‌ನಲ್ಲಿ ಸಂಪರ್ಕ: ‘ಪತ್ನಿ ಮತ್ತು ಮಗನ ಜತೆಗೆ ಸಂಪರ್ಕದಲ್ಲಿರಲು ವಿಡಿಯೊಕಾಲ್ ದಾರಿಯಾಗಿತ್ತು. ಮನೆಯ ಬಾಡಿಗೆ, ವಿದ್ಯುತ್ ಬಿಲ್, ಮಗನ ಶಾಲಾ ಶುಲ್ಕ ಪಾವತಿ ಮಾಡುತ್ತಿದ್ದೆ. ಪಡಿತರ ಮತ್ತು ತರಕಾರಿಗಳ ಚೀಲಗಳನ್ನು ಮನೆಯ ಮುಂಬಾಗಿಲಿನಲ್ಲಿ ಇಟ್ಟು ಹೋಗುತ್ತಿದ್ದೆ’ ಎಂದು ಸುಜನ್ ತಿಳಿಸಿದ್ದಾರೆ.

ಮೂರು ವರ್ಷಗಳ ಬಳಿಕ ಪತ್ನಿ ಹಾಗೂ ಪುತ್ರನನ್ನು ನೋಡಿದ ಸಂತಸದಲ್ಲಿರುವ ಸುಜನ್ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

ಮೂರು ವರ್ಷಗಳಿಂದ ಸೂರ್ಯನನ್ನೇ ನೋಡಿರಲಿಲ್ಲ!

‘ಆರಂಭದಲ್ಲಿ ಸುಜನ್ ಹೇಳಿದ್ದ ಮಾತುಗಳನ್ನು ನಂಬಿರಲಿಲ್ಲ. ಆದರೆ, ಅವರು ಪತ್ನಿ ಮತ್ತು ಮಗನೊಂದಿಗೆ ವಿಡಿಯೊ ಕಾಲ್ ಮಾಡಿ ಮಾತನಾಡಿ ತೋರಿಸಿದರು. ಆಗ ನಾನು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದೆ. ಮುನ್‌ಮುನ್ ಮತ್ತು ಆಕೆಯ ಪುತ್ರ ವಾಸವಿದ್ದ ಮನೆಯಲ್ಲಿ ಸಾಕಷ್ಟು ಕಸ ಸಂಗ್ರಹವಾಗಿದೆ. ಇನ್ನೂ ಕೆಲವು ದಿನಗಳು ಕಳೆದಿದ್ದರೆ ಏನಾದರೂ ಅಹಿತಕರ ಘಟನೆ ಸಂಭವಿಸುವ ಸಾಧ್ಯತೆ ಇತ್ತು. 10 ವರ್ಷದ ಬಾಲಕ ಮೂರು ವರ್ಷಗಳಿಂದ ಸೂರ್ಯನನ್ನೇ ನೋಡಿರಲಿಲ್ಲ. ಅಷ್ಟೇ ಅಲ್ಲ, ಕೋವಿಡ್ ಭೀತಿಯಿಂದಾಗಿ ಮಹಿಳೆಯು ಅಡುಗೆ ಅನಿಲ ಸಿಲಿಂಡರ್ ಬಳಸುತ್ತಿರಲಿಲ್ಲ ಹಾಗೂ ಅಗತ್ಯಕ್ಕೆ ಬೇಕಾಗುವಷ್ಟು ನೀರಿನ ಸಂಗ್ರಹವನ್ನೂ ಮಾಡಿರಲಿಲ್ಲ’ ಎಎಸ್ಐ ಪ್ರವೀಣ್‌ ಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.