ADVERTISEMENT

ಜಾತಿ ಆಧಾರಿತ ಸಂಘರ್ಷಕ್ಕೆ ಪ್ರಚೋದನೆ‘ಅಪರಿಚಿತರ’ ವಿರುದ್ಧ ಎಫ್ಐಆರ್ ದಾಖಲು

ಪಿಟಿಐ
Published 5 ಅಕ್ಟೋಬರ್ 2020, 15:46 IST
Last Updated 5 ಅಕ್ಟೋಬರ್ 2020, 15:46 IST

ಹಾಥರಸ್: ಜಾತಿ ಆಧಾರಿತ ಸಂಘರ್ಷ ಉಂಟು ಮಾಡಲು ಯತ್ನ ಕುರಿತಂತೆ ಹಾಥರಸ್ ಪೊಲೀಸರು ‘ಅಪರಿಚಿತ ವ್ಯಕ್ತಿಗಳ’ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ದೇಶದ್ರೋಹ ಸೇರಿದಂತೆ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.

19 ವರ್ಷದ ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರ ಪ್ರಕರಣ ವಿವಾದದ ಸ್ವರೂಪ ಪಡೆದು, ನಿರಂತರ ಪ್ರತಿಭಟನೆ ಹಾಗೂ ರಾಜಕೀಯ ಮುಖಂಡರು, ಕಾರ್ಯಕರ್ತರು ಭೇಟಿ ನೀಡುವುದು ಹೆಚ್ಚಾದಂತೆಯೇ ಈ ಬೆಳವಣಿಗೆ ನಡೆದಿದೆ.

ಭಾನುವಾರ ಮಧ್ಯಾಹ್ನ ಇಲ್ಲಿನ ಚಾಂದ್‌ಪಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್‌ 124ಎ (ದೇಶದ್ರೋಹ), 505 (ಸಾರ್ವಜನಿಕ ನೆಮ್ಮದಿ ಭಂಗ ತರಲು ಪ್ರೇರೇಪಣೆ), 153ಎ (ಗುಂಪುಗಳ ನಡುವೆ ದ್ವೇಷ ಮೂಡಿಸುವುದು) ಪ್ರಕರಣಗಳಡಿ ಮೊಕದ್ದಮೆ ದಾಖಲಾಗಿದೆ.

ADVERTISEMENT

ಅಲ್ಲದೆ, ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 (ವಿದ್ಯುನ್ಮಾನ ಮಾದರಿಯಲ್ಲಿ ಅನುಚಿತವಾದ ಮಾಹಿತಿಗಳ ರವಾನೆ) ಅನ್ವಯವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಥರಸ್‌ಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ಹೇಳಿಕೆಗಳು, ವಾಸ್ತವಾಂಶಗಳನ್ನು ತಿರುಚಿ ಜಾಲತಾಣಗಳಲ್ಲಿ ಹಾಕಲಾಗುತ್ತಿದೆ. ಮಾಧ್ಯಮ ಸಂಸ್ಥೆಗಳ ಹೆಸರಿನಲ್ಲಿ ತಿರುಚಲಾದ ಲೊಗೊವನ್ನು ಬಳಸಿ ಇವುಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಾತಿ ಸಂಘರ್ಷ, ತಿಕ್ಕಾಟಗಳಿಗೆ ಕಾರಣವಾಗುವ ಮಾಹಿತಿಗಳನ್ನು ಕೆಲವರು ಹಂಚಿಕೊಳ್ಳುತ್ತಿದ್ದಾರೆ. ಈ ಎಲ್ಲವೂ ಗಂಭೀರ ಸ್ವರೂಪದ ಅಪರಾಧಗಳು ಎಂದು ಪೊಲೀಸರು ತಿಳಿಸಿದ್ದು, ಈ ಕುರಿತು ತನಿಖೆಯು ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.