ADVERTISEMENT

ಚೆನ್ನೈನಲ್ಲಿ ಇಂದು ಮತ್ತು ನಾಳೆ ಭಾರಿ ಮಳೆ: ಹವಾಮಾನ ಇಲಾಖೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2022, 11:46 IST
Last Updated 9 ಡಿಸೆಂಬರ್ 2022, 11:46 IST
   

ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಮಾಂಡೌಸ್ ಚಂಡಮಾರುತದ ಪರಿಣಾಮ ಚೆನ್ನೈನಲ್ಲಿ ಇಂದು ಮತ್ತು ನಾಳೆ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆಯ ಉಪ ನಿರ್ದೇಶಕ ಎಸ್. ಬಾಲಚಂದ್ರನ್ ತಿಳಿಸಿದ್ದಾರೆ ಎಂದು ಎಎನ್‌ಐ ಟ್ವೀಟಿಸಿದೆ.

ಮಾಂಡೌಸ್ ಚಂಡಮಾರುತ ವಾಯುವ್ಯದೆಡೆಗೆ ಚಲಿಸುವ ನಿರೀಕ್ಷೆ ಇದ್ದು, ಇಂದು ರಾತ್ರಿ ಅಥವಾ ನಾಳೆ ಬೆಳಗಿನ ಜಾವ ಪುದುಚೆರಿ ಮತ್ತು ಶ್ರೀಹರಿಕೋಟಾ ದಾಟುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ತಮಿಳುನಾಡಿನ ಚೆಂಗಲ್‌ಪಟ್ಟು, ವಿಲ್ಲುಪುರಂ ಮತ್ತು ಕಂಚೀಪುರಂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಈಗಾಗಲೇ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ADVERTISEMENT

ಈಗಾಗಲೇ ತಮಿಳುನಾಡಿನ ಹಲವೆಡೆ ಸಣ್ಣ ಪ್ರಮಾಣದ ಮಳೆ ಆಗಿರುವ ವರದಿಗಳು ಬಂದಿವೆ. ಕೆಲವೆಡೆ ಅಧಿಕ ಪ್ರಮಾಣದ ಮಳೆಯೂ ಆಗಿದೆ.

ಚಂಡಮಾರುತ ತಮಿಳುನಾಡಿನ ಕರಾವಳಿಗೆ ಸಮೀಪಿಸುತ್ತಿದ್ದು, ಮಧ್ಯರಾತ್ರಿ ವೇಳೆ ಕರಾವಳಿ ದಾಟುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಮಾಂಡೌಸ್ ಅರೇಬಿಕ್ ಪದವಾಗಿದ್ದು, ‘ನಿಧಿ ಪೆಟ್ಟಿಗೆ’ಎಂಬುದು ಇದರ ಅರ್ಥ. ಅರಬ್ ಸಂಯುಕ್ತ ಸಂಸ್ಥಾನವು ಈ ಹೆಸರನ್ನು ಸೂಚಿಸಿದೆ.

ಚಂಡಮಾರುತ ಹಿನ್ನೆಲೆಯಲ್ಲಿ ಚೆನ್ನೈನಿಂದ ಹೊರಡಬೇಕಿದ್ದ 4 ವಿಮಾನಗಳನ್ನು ರದ್ದುಪಡಿಸಲಾಗಿದೆ.

ಮಂಡೌಸ್ ಚಂಡಮಾರುತ ಧರೆಗೆ ಅಪ್ಪಳಿಸುವ ಎರಡು ಗಂಟೆ ಮುನ್ನ ಮತ್ತು ನಂತರ ಎರಡು ಗಂಟೆವರೆಗೆ ತಮಿಳುನಾಡಿನ ರಸ್ತೆ ಸಾರಿಗೆ ಬಸ್‌ಗಳ ಸಂಚಾರವನ್ನು ರದ್ದುಪಡಿಸಲು ಸಿಎಂ ಸ್ಟ್ಯಾಲಿನ್ ಆದೇಶಿಸಿದ್ಧಾರೆ.

ಈ ಮಧ್ಯೆ, ಚೆನ್ನೈ ಮರೀನಾ ಬೀಚ್‌ನಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡಿದ್ದ ₹115 ಕೋಟಿ ವೆಚ್ಚದ ವುಡನ್ ರ್‍ಯಾಂಪ್, ಭಾರೀ ಅಲೆಗಳ ಅಬ್ಬರದಲ್ಲಿ ಹಾನಿಗೊಳಗಾಗಿದೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.