ADVERTISEMENT

ಕೇರಳದಲ್ಲಿ ಭಾರಿ ಮಳೆ: ಕೆಲವೆಡೆ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ

ಪಿಟಿಐ
Published 3 ಅಕ್ಟೋಬರ್ 2023, 14:20 IST
Last Updated 3 ಅಕ್ಟೋಬರ್ 2023, 14:20 IST
.
.   

ತಿರುವನಂತಪುರ: ಕೇರಳದ ಹಲವು ಭಾಗಗಳಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಪ್ರದೇಶಗಳ ಶೈಕ್ಷಣಿಕ ಸಂಸ್ಥೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು.

ಕೊಟ್ಟಾಯಂ, ವೈಕಮ್‌, ಚಂಗನಶ್ಶೇರಿ ತಾಲ್ಲೂಕುಗಳ ಶೈಕ್ಷಣಿಕ ಸಂಸ್ಥೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಈ ತಾಲೂಕುಗಳಲ್ಲಿ 17 ಪರಿಹಾರ ಕೇಂದ್ರ ಸ್ಥಾಪಿಸಿ 246 ಮಂದಿಗೆ ಆಶ್ರಯ ನೀಡಲಾಗಿದೆ.

ಅಲಪ್ಪುಳ ಜಿಲ್ಲೆಯ ಚೇರ್ತಳಾ ಮತ್ತು ಚೆಂಗನ್ನೂರು ತಾಲ್ಲೂಕುಗಳ ಶಾಲೆ–ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ADVERTISEMENT

ತಿರುವನಂತಪುರ, ಕೊಲ್ಲಂ, ಪಟ್ಟಣಂತಿಟ್ಟು, ಅಲಪ್ಪುಳ  ಮತ್ತು ಕೊಟ್ಟಾಯಂ ಜಿಲ್ಲೆಗಳ ಕೆಲ ಭಾಗಗಳಲ್ಲಿ ಮಂಗಳವಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ತಿರುವನಂತಪುರ, ಅಲಪ್ಪುಳ, ಕೊಲ್ಲಂ ಮತ್ತು ಪಟ್ಟಣಂತಿಟ್ಟು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್‌ ಘೋಷಿಸಲಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಹಲವೆಡೆ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮರಗಳು ಧರೆಗುರುಳಿವೆ, ಗೋಡೆಗಳು ಕುಸಿದಿವೆ. ರಸ್ತೆಗಳು ಜಲಾವೃತಗೊಂಡು ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.