ADVERTISEMENT

ಶಬರಿಮಲೆ: 50 ಮಹಿಳೆಯರ ಗುಂಪಿನಿಂದ ದೇಗುಲ ಪ್ರವೇಶ ಸಾಧ್ಯತೆ

ಪಿಟಿಐ
Published 22 ಡಿಸೆಂಬರ್ 2018, 12:58 IST
Last Updated 22 ಡಿಸೆಂಬರ್ 2018, 12:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಬರಿಮಲೆ: ಶಬರಿಮಲೆಯಲ್ಲಿ ವಾರ್ಷಿಕ ‘ಮಂಡಲ ಪೂಜೆ’ಗೆ ಕೆಲವೇ ದಿನಗಳು ಬಾಕಿ ಇರುವ ವೇಳೆಯಲ್ಲಿಯೇ, ಭಾನುವಾರ ಸುಮಾರು 50 ಮಹಿಳೆಯರ ಗುಂಪೊಂದು ದೇಗುಲಕ್ಕೆ ಭೇಟಿ ನೀಡಲಿದೆ ಎಂದು ವರದಿಯಾಗಿದೆ. ಇವರೆಲ್ಲರೂ 50ಕ್ಕಿಂತ ಕಡಿಮೆ ವಯೋಮಾನದವರು ಎನ್ನುವ ಕಾರಣದಿಂದಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಚೆನ್ನೈ ಮೂಲದ ಸಂಘಟನೆಯೊಂದರ ಬೆಂಬಲದಲ್ಲಿ ಇವರೆಲ್ಲರೂ ದೇಗುಲಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಮಲಯಾಳಂ ದೃಶ್ಯಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಸಂಘಟನೆಯ ಸದಸ್ಯೆ ಸೆಲ್ವಿ ಎನ್ನುವವರು, ‘ಗುಂಪಿನಲ್ಲಿ ಕೇರಳ ಮಾತ್ರವಲ್ಲದೆ ತಮಿಳುನಾಡು, ಮಧ್ಯಪ್ರದೇಶ, ಒಡಿಶಾ ಹಾಗೂ ಕರ್ನಾಟಕದ ಮಹಿಳೆಯರೂ ಇದ್ದಾರೆ’ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಗೆ ಮಾಹಿತಿ: ದೇಗುಲಕ್ಕೆ ಭೇಟಿ ನೀಡುವ ಕುರಿತು ಈಗಾಗಲೇ ಕೇರಳ ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆಯಲಾಗಿದೆ ಎಂದು ಸೆಲ್ವಿ ಹೇಳಿದ್ದಾರೆ.

ADVERTISEMENT

ಮಹಿಳೆಯರ ಗುಂಪು ದೇಗುಲಕ್ಕೆ ತೆರಳಲಿರುವ ವಿಷಯವನ್ನು ದೃಢಪಡಿಸಿದ ಪೊಲೀಸರು, ‘ಮಾಹಿತಿ ಪ್ರಕಾರ ಗುಂಪು ಬೆಳಗ್ಗೆ 10 ಗಂಟೆಗೆ ಕೊಟ್ಟಾಯಂ ತಲುಪಲಿದೆ. ಅವರು ಯಾವುದೇ ರೀತಿಯ ವಿಶೇಷ ಭದ್ರತೆ ಕೇಳಿಲ್ಲ. ನಿಲಕ್ಕಲ್‌ನಲ್ಲಿರುವ ಬೇಸ್ ಕ್ಯಾಂಪ್ ತಲುಪಿದಾಗ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ವ್ಯತ್ಯಯವಾದರೆ, ಸೂಕ್ತವಾಗಿ ನಿರ್ವಹಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಶುಕ್ರವಾರ ಒಂದೇ ದಿನ 1,12,260 ಭಕ್ತಾದಿಗಳು ದರ್ಶನ ಪಡೆದುಕೊಂಡಿದ್ದು, ಈ ವರ್ಷದಲ್ಲಿನ ದಾಖಲೆಯಾಗಿದೆ. ಮುಂಬರುವ ದಿನಗಳಲ್ಲಿ ಭಕ್ತಾದಿಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.