ADVERTISEMENT

ಉತ್ತರ ಭಾರತ: ಉಕ್ಕಿ ಹರಿದ ನದಿಗಳು, ರಸ್ತೆಗಳೇ ಮಾಯ

ಪಿಟಿಐ
Published 11 ಜುಲೈ 2023, 5:06 IST
Last Updated 11 ಜುಲೈ 2023, 5:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ನವದೆಹಲಿ: ಮಳೆ ಆರ್ಭಟದಿಂದ ಉತ್ತರ ಭಾರತದಲ್ಲಿ ಮೃತರಾದವರ ಸಂಖ್ಯೆ 29ಕ್ಕೆ ಏರಿದೆ. ಅಧಿಕ ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಉಂಟಾಗುತ್ತಿದ್ದು, ನಾಲ್ವರು ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ. 

ಭೂಕುಸಿತದ ಪರಿಣಾಮವಾಗಿ ಶಿಮ್ಲಾ-ಕಲ್ಕಾ ಹೆದ್ದಾರಿಯನ್ನು, ರೈಲು ಮಾರ್ಗವನ್ನೂ ನಿರ್ಬಂಧಿಸಲಾಗಿದೆ. ಕಳೆದ ಮೂರು ದಿನಗಳಲ್ಲಿ ರಾಜ್ಯದಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ 20 ಮಂದಿ ಮೃತಪಟ್ಟಿದ್ದಾರೆ ಎಂದು ಹಿಮಾಚಲ ಪ್ರದೇಶದ ರಾಜ್ಯದ ವಿಪತ್ತು ನಿರ್ವಹಣಾ ಪಡೆಯ ಹಿರಿಯ ಅಧಿಕಾರಿ ಓಂಕಾರ್ ಶರ್ಮಾ ಹೇಳಿದ್ದಾರೆ. ಪ್ರವಾಸಿ ತಾಣ ಮನಾಲಿಯಲ್ಲಿ ಸಿಲುಕಿದ್ದ 20 ಜನರನ್ನು ರಕ್ಷಿಸಲಾಗಿದೆಯಾದರೂ, ಇತರೆಡೆಗಳಲ್ಲಿ 300ಕ್ಕೂ ಹೆಚ್ಚು ಜನರು ಸಂಕಷ್ಟದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಮ್ಲಾದಲ್ಲಿ 120ಕ್ಕೂ ಹೆಚ್ಚು ರಸ್ತೆಗಳು ಬಂದ್ ಆಗಿದ್ದು, 484 ನೀರು ಸರಬರಾಜು ವ್ಯವಸ್ಥೆಗಳಿಗೆ ತೊಂದರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮಳೆ ಅನಾಹುತಗಳ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ವಿಡಿಯೊ ಸಂದೇಶ ಬಿಡುಗಡೆ ಮಾಡಿದ ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್‌ ಸಿಂಗ್‌ ಸುಖು, ‘ಜನರು ಮಳೆಯಲ್ಲಿ, ನದಿಗಳ ಬಳಿ ಹೋಗಬಾರದು ಎಂದು ಮನವಿ ಮಾಡಿಕೊಂಡರು. ಮುಂದಿನ 24 ಗಂಟೆಗಳ ಕಾಲ ಜಾಗರೂಕರಾಗಿರಿ’ ಎಂದೂ ಕೋರಿದರು. ಮಳೆ ಮಂಗಳವಾರವೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಸಂಕಷ್ಟದ ಸಮಯದಲ್ಲಿ ಎಲ್ಲಾ ಶಾಸಕರು ತಮ್ಮ ಕ್ಷೇತ್ರಗಳಲ್ಲಿಯೇ ಉಳಿದು ಜನರಿಗೆ ಸಹಾಯ ಮಾಡುವಂತೆಯೂ ಅವರು ಕೇಳಿಕೊಂಡರು.

ಅಪಾಯದ ಮಟ್ಟಕ್ಕೆ ಯಮುನೆ: ದೆಹಲಿಯಲ್ಲಿ ಯಮುನಾ ನದಿಯೂ ಸೇರಿದಂತೆ ಉತ್ತರ ಭಾರತದ ಹಲವಾರು ನದಿಗಳು ಉಕ್ಕಿ ಹರಿಯುತ್ತಿವೆ. ಬಹುತೇಕ ಮಂಗಳವಾರ ಯಮುನೆ ಅಪಾಯದ ಮಟ್ಟ ಮೀರಬಹುದು ಎಂದು ಅಂದಾಜಿಸಲಾಗಿದೆ.

ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ಯುಮುನಾ ನದಿಗೆ ಹೆಚ್ಚಿನ ನೀರು ಬಿಡುಗಡೆ ಮಾಡಲಾಗಿದ್ದು, ನವದೆಹಲಿಯಲ್ಲಿ ಯಮುನೆ 205.33 ಮೀಟರ್‌ ಮಟ್ಟದಲ್ಲಿ ಹರಿಯುತ್ತಿದೆ. 

ಈ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿದರು.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಯಮುನಾ ನದಿಯ ನೀರಿನ ಮಟ್ಟ 206 ಮೀಟರ್ ಸಮೀಪಿಸುತ್ತಿದೆ. ನದಿಯ ಸುತ್ತಮುತ್ತಲ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುವ ಕಾರ್ಯ ಆರಂಭಿಸಲಾಗುವುದು. ರಾಷ್ಟ್ರರಾಜಧಾನಿಯಲ್ಲಿ ಪ್ರವಾಹ ಸ್ಥಿತಿ ಎದುರಾಗದು ಎಂದು ಹವಾಮಾನ ತಜ್ಞರು ಹೇಳಿದ್ದಾರೆ ಎಂದು ಜನರಿಗೆ ಭರವಸೆ ನೀಡಿದರು.

ಪಂಜಾಬ್‌, ಹರಿಯಾಣ ತತ್ತರ: ಪಂಜಾಬ್‌ ಮತ್ತು ಹರಿಯಾಣಗಳಲ್ಲೂ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸ್ಥಳಿಯಾಡಳಿತಗಳು ಹರಸಾಹಸಪಡುತ್ತಿವೆ. ಪಂಜಾಬ್ ಸರ್ಕಾರವು ಜುಲೈ 13 ರವರೆಗೆ ರಾಜ್ಯದ ಶಾಲೆಗಳನ್ನು ಮುಚ್ಚಲು ಆದೇಶಿಸಿದೆ.

ಮಳೆ ಹಾನಿ ಹಿನ್ನೆಲೆಯಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಸೋಮವಾರ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದರು. ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.

ಉತ್ತರ ಪ್ರದೇಶದಲ್ಲೂ ಕಟ್ಟೆಚ್ಚರ: ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ನದಿಗಳು ಉಕ್ಕಿ ಹರಿಯುವ ಸಾಧ್ಯತೆಯಿರುವುದರಿಂದ ಎಚ್ಚರಿಕೆಯಿಂದ ಇರುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ.

ದೆಹಲಿಯಲ್ಲಿ ಸಮಸ್ಯೆ: ಎಎಪಿ ವಿರುದ್ಧ ಬಿಜೆಪಿ ಪ್ರತಿಭಟನೆ

ನವದೆಹಲಿ (ಪಿಟಿಐ): ದಾಖಲೆ ಮಳೆಗೆ ಸಾಕ್ಷಿಯಾಗಿರುವ ದೆಹಲಿಯಲ್ಲಿ ಸದ್ಯ ರಸ್ತೆ, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಎಎಪಿಯನ್ನು ಹಣಿಯಲು ಬಿಜೆಪಿ ಈ ವಿಚಾರವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿದೆ.

ಮಳೆ ನೀರು ನಿಂತಿರುವುದರಿಂದ ಜನರಿಗೆ ಉಂಟಾದ ಸಮಸ್ಯೆಯನ್ನು ಮುಂದಿಟ್ಟುಕೊಂಡು ದೆಹಲಿ ಬಿಜೆಪಿ ಸೋಮವಾರ ಡಿಡಿಯು ಮಾರ್ಗ್‌ನಲ್ಲಿರುವ ಎಎಪಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿತು.

‘ಜನವಸತಿ ಪ್ರದೇಶ, ರಸ್ತೆಗಳಲ್ಲಿ ನೀರು ನಿಂತಿದೆ. ಸಂಚಾರ ದಟ್ಟಣೆ ಉಂಟಾಗಿದೆ. ಜನರಿಗೆ ಈ ಸಮಸ್ಯೆ ತಂದೊಡ್ಡಿದ್ದಕ್ಕಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನಾಚಿಕೆಯಾಗಬೇಕು. ದೆಹಲಿಯಲ್ಲಿ ಇಂತಹ ಅವ್ಯವಸ್ಥೆಯನ್ನು ನಾನು ಹಿಂದೆ ನೋಡಿರಲಿಲ್ಲ’ ಎಂದು ದೆಹಲಿಯ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ ದೆಹಲಿಯಲ್ಲಿ 15.3 ಸೆಂ.ಮೀ ಮಳೆಯಾ ಗಿತ್ತು. ಇದು 1982ರಿಂದ ಈ ವರೆಗೆ ಜುಲೈನಲ್ಲಿ ಒಂದೇ ದಿನದಲ್ಲಿ ಸುರಿದ ಅಧಿಕ ಪ್ರಮಾಣದ ಮಳೆ ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.