ADVERTISEMENT

ಉನ್ನತ ಪದವಿ ಅನರ್ಹತೆಯ ಮಾನದಂಡವಲ್ಲ: ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 14:31 IST
Last Updated 10 ಏಪ್ರಿಲ್ 2021, 14:31 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ‘ಉನ್ನತ ಪದವಿಯು ಕಿರಿಯ ಎಂಜಿನಿಯರ್ ಹುದ್ದೆಗೆ (ಜೆಇ) ಅನರ್ಹತೆ ಎಂಬುದನ್ನು ಪರಿಗಣಿಸಲಾಗದು’ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಉದಯ್ ಉಮೇಶ್ ಲಲಿತ್ ಮತ್ತು ಎಸ್. ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠವು ಬಿ.ಇ ಮತ್ತು ಬಿ.ಟೆಕ್ ಪದವಿ ಗಳಿಸಿದವರು ಜೂನಿಯರ್ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು ಎಂದು ತೀರ್ಪು ನೀಡಿದೆ.

ಹಿಮಾಚಲ ಪ್ರದೇಶದ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯ ಜೂನಿಯರ್ ಎಂಜಿನಿಯರ್‌ಗಳ ನೇಮಕಾತಿಗೆ ಸಂಬಂಧಪಟ್ಟಂತೆ ಅಭ್ಯರ್ಥಿಗಳಾದ ಪುನೀತ್ ಶರ್ಮಾ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ತೀರ್ಪು ನೀಡಿದೆ.

ADVERTISEMENT

ಅರ್ಜಿದಾರರು ಹಿಮಾಚಲ ಪ್ರದೇಶದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

‘ಜೆ.ಇ ಹುದ್ದೆಗೆ ಉನ್ನತ ಪದವೀಧರರೂ ಅರ್ಜಿ ಸಲ್ಲಿಸಬಹುದು. ವಿದ್ಯುಚ್ಛಕ್ತಿ ಮಂಡಳಿಯ ನೇರ ನೇಮಕಾತಿ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಇದರಲ್ಲಿ ಜೆ.ಇ ಮಟ್ಟದ ಹುದ್ದೆಗಳದ್ದೇ ಸಿಂಹಪಾಲು ಇದೆ’ ಎಂದೂ ನ್ಯಾಯಪೀಠವು ಹೇಳಿದೆ.

‘ಇದರಲ್ಲಿ ಉನ್ನತ ಹುದ್ದೆಯಾಗಿರುವ ಸಹಾಯಕ ಎಂಜಿನಿಯರ್ ಮಟ್ಟದ ಹುದ್ದೆಗಳು ಒಟ್ಟು ಹುದ್ದೆಗಳ ಪೈಕಿ ಶೇ 36ರಷ್ಟು ಮಾತ್ರ ಇವೆ. ಇನ್ನುಳಿದ ಶೇ 64 ಹುದ್ದೆಗಳು ಫೀಡರ್ ಮಟ್ಟದವು ಹಾಗೂ ಕಿರಿಯ ಎಂಜಿನಿಯರ್ ಮಟ್ಟದ್ದಾಗಿವೆ. ಅಂದರೆ, ಕೆಳಹಂತದ ಎಂಜಿನಿಯರ್ ಹುದ್ದೆಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಕಿರಿಯ ಎಂಜಿನಿಯರ್‌ನಂಥ ಕೆಳಹುದ್ದೆಗೆ ಉನ್ನತ ಪದವೀಧರರನ್ನು ಉದ್ದೇಶಪೂರ್ವಕವಾಗಿಯೇ ಪರಿಗಣಿಸದಿರುವ ನಿಯಮ ತಯಾರಕರ ಮನಸ್ಥಿತಿಯನ್ನು ಇದು ತೋರಿಸುತ್ತದೆ’ ಎಂದೂ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

‘ಜೆ.ಇ ಹುದ್ದೆಗೆ ಪದವೀಧರರಷ್ಟೇ ಅಲ್ಲ ಉನ್ನತ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರು. ಹಾಗೆಂದು ಪದವೀಧರರು ಉನ್ನತ ಪದವಿ ಪಡೆಯಬೇಕೆಂಬ ಕರಾರು ಇಲ್ಲ’ ಎಂಬುದನ್ನು ನ್ಯಾಯಪೀಠವನ್ನು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.