ADVERTISEMENT

'ಪ್ರಧಾನ ಮಂತ್ರಿ ಅಮಿತ್‌ ಶಾ' ಎಂದ ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮ

ಪಿಟಿಐ
Published 11 ಮೇ 2022, 11:20 IST
Last Updated 11 ಮೇ 2022, 11:20 IST
ಕೇಂದ್ರ ಗೃಹ ಸಚಿವ ಅಮಿತ್‌ ಶಾ
ಕೇಂದ್ರ ಗೃಹ ಸಚಿವ ಅಮಿತ್‌ ಶಾ   

ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ಅವರು ತಮ್ಮ ಭಾಷಣದ ಸಂದರ್ಭ 'ಪ್ರಧಾನ ಮಂತ್ರಿ ಅಮಿತ್‌ ಶಾ..' ಎಂದು ಸಂಬೋಧಿಸುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.

'ಇದೊಂದು ಬಾಯ್ತಪ್ಪಿನಿಂದಾದ ತಪ್ಪು' ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಆದರೆ ಪ್ರತಿಪಕ್ಷಗಳು, 'ಅಮಿತ್‌ ಶಾ ಅವರನ್ನು ಮುಂದಿನ ಪ್ರಧಾನಿ ಎಂದು ಪ್ರಚಾರ ಮಾಡುವ ತಂತ್ರವಿದು' ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ.

ಬಿಸ್ವಾ ನೇತೃತ್ವದ ರಾಜ್ಯ ಸರ್ಕಾರಕ್ಕೆ 1 ವರ್ಷ ಪೂರೈಸಿದ್ದರ ಭಾಗವಾಗಿ ಅವರು ಬುಧವಾರ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹಾಜರಿದ್ದರು.

ADVERTISEMENT

'ಪ್ರಧಾನ ಮಂತ್ರಿ ಅಮಿತ್‌ ಶಾ ಮತ್ತು ನಮ್ಮ ಮೆಚ್ಚಿನ ಗೃಹ ಸಚಿವರಾದ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಮಾರ್ಗದರ್ಶನ ಮತ್ತು ಸ್ಫೂರ್ತಿಯಿಂದ ರಾಜ್ಯ ಸರ್ಕಾರ 1 ವರ್ಷ ಪೂರೈಸಿದೆ' ಎಂದು ಬಿಸ್ವಾ ಅವರು ಮಾಡಿರುವ ಭಾಷಣದ 15 ಸೆಕೆಂಡಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ.

ಬಿಜೆಪಿಯ ಉನ್ನತ ಮಟ್ಟದ ನಾಯಕರ ಹುದ್ದೆಗಳನ್ನು ಬದಲಿಸಿ ಹೇಳಿರುವ ಹಿಂದಿನ ಅಜೆಂಡಾ ಏನು? ಎಂದು ವೈರಲ್‌ ವಿಡಿಯೊ ಹಂಚಿಕೊಂಡಿರುವ ಅಸ್ಸಾಂನ ಪ್ರತಿಪಕ್ಷಗಳು ಪ್ರಶ್ನಿಸಿವೆ.

'ಸರ್ಬಾನಂದ ಸೋನೋವಾಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಸಂಸದ ಪಲ್ಲಬ್‌ ಲೋಚನ ದಾಸ್‌ ಅವರು ಹಲವು ಸಾರ್ವಜನಿಕ ಸಭೆಗಳಲ್ಲಿ ಹಿಮಾಂತ ಬಿಸ್ವಾ ಶರ್ಮ ಅವರನ್ನು ಮುಖ್ಯಮಂತ್ರಿ ಎಂದು ಸಂಬೋಧಿಸಿದ್ದರು' ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಬದಲಿಸಲು ಬಿಜೆಪಿ ನಿರ್ಧರಿಸಿದೆಯೇ ಅಥವಾ ಅಮಿತ್‌ ಶಾ ಅವರನ್ನು ಪ್ರಧಾನಿ ಎಂದು ಪ್ರಚಾರ ಮಾಡಲು ಆರಂಭಿಸಿದೆಯೇ? ಎಂದು ಕಾಂಗ್ರೆಸ್‌ ಟ್ವೀಟ್‌ನಲ್ಲಿ ಪ್ರಶ್ನಿಸಿದೆ.

ಇದು ಬಾಯ್ತಪ್ಪಿನಿಂದ ಸಂಭವಿಸಿದ ತಪ್ಪಲ್ಲ. ಇದೊಂದು ತಂತ್ರ ಎಂದು ಅಸ್ಸಾಂ ಜಾತೀಯ ಪರಿಷದ್‌(ಎಜೆಪಿ) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.