ನವದೆಹಲಿ: ಭಾರತವನ್ನು 2047ರೊಳಗೆ ಅಭಿವೃದ್ದಿ ಹೊಂದಿದ ದೇಶವನ್ನಾಗಿಸಲು ಹಿಂದಿ ಭಾಷೆಯನ್ನು ಪ್ರಚಾರ ಮಾಡಿ ಹಾಗೂ ಸ್ವದೇಶಿ ಉತ್ಪನ್ನಗಳನ್ನು ಬಳಸಿ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ತಿಳಿಸಿದ್ದಾರೆ.
ದೆಹಲಿ ವಿಶ್ವವಿದ್ಯಾನಿಲಯದ ದೀನ್‌ದಯಾಳ್ ಉಪಾಧ್ಯಾಯ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
‘ಕೆಲವರು ತಮಗೆ ಹಿಂದಿ ಬರುವುದಿಲ್ಲ ಎನ್ನುವುದನ್ನೇ ಸಾಧನೆಯಂತೆ ಬಿಂಬಿಸಿಕೊಳ್ಳುತ್ತಾರೆ. ಆದರೆ, ವಿದ್ಯಾರ್ಥಿಗಳು ನಿಮ್ಮ ಮೂಲವನ್ನು ಮರೆಯಬಾರದು. ನಿಮ್ಮ ಸಂಸ್ಕೃತಿಯ ಕುರಿತು ಹೆಮ್ಮೆ ಇರಲಿ. ನಮ್ಮ ಇತಿಹಾಸದ ಕುರಿತು ಗೌರವವಿದ್ದರೆ ಮಾತ್ರ ಉತ್ತಮ ಭವಿಷ್ಯ ನಿರ್ಮಿಸಲು ಸಾಧ್ಯ’ ಎಂದು ಹೇಳಿದ್ದಾರೆ.
ಯುವಶಕ್ತಿಯಿಂದ ಮಾತ್ರ ಭಾರತವು ಅಭಿವೃದ್ದಿ ಹೊಂದಿದ ದೇಶವಾಗಲು ಸಾಧ್ಯ. ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಪ್ರಗತಿಯ ಜೊತೆಗೆ ದೇಶ ಭಕ್ತಿಯನ್ನು ಕೂಡ ವಿದ್ಯಾರ್ಥಿಗಳಲ್ಲಿ ಬೆಳಸಬೇಕು ಎಂದಿದ್ದಾರೆ.
ಕಳೆದ ಸರ್ಕಾರವು ಶಿಕ್ಷಕರಿಗೆ ಸಂಬಳವನ್ನು ನೀಡದೇ, ಯಾವ ರೀತಿಯ ಶಿಕ್ಷಣವನ್ನು ನೀಡಲು ಬಯಸಿತ್ತು ಎಂದು ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರವು ವಿಶ್ವವಿದ್ಯಾನಿಲಯದ ಅಭಿವೃದ್ದಿಗೆ ಸಹಾಯ ಮಾಡಲಿದೆ. ಯಾವುದೇ ಅನುದಾನ ಕೊರತೆಯಾಗದಂತೆ ನೋಡಿಕೊಳ್ಳಲಿದೆ ಎಂದು ಆಶ್ವಾಸನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.