ADVERTISEMENT

ದಕ್ಷಿಣದಲ್ಲಿ ಮಿಷನರಿಗಳಿಗಿಂತ ಹಿಂದೂ ಸಂತರ ಸೇವೆ ದೊಡ್ಡದು: ಭಾಗವತ್‌

ಜೈಪುರದಲ್ಲಿ ‘ರಾಷ್ಟ್ರೀಯ ಸೇವಾ ಸಂಗಂ’ ಸಮಾವೇಶ

ಪಿಟಿಐ
Published 7 ಏಪ್ರಿಲ್ 2023, 11:22 IST
Last Updated 7 ಏಪ್ರಿಲ್ 2023, 11:22 IST
ಮೋಹನ್‌ ಭಾಗವತ್‌
ಮೋಹನ್‌ ಭಾಗವತ್‌   

ಜೈಪುರ: ದಕ್ಷಿಣದ ರಾಜ್ಯಗಳಲ್ಲಿ ಮಿಷನರಿಗಳಿಗಿಂತ ಹಿಂದೂ ಆಧ್ಯಾತ್ಮಿಕ ಗುರುಗಳು ಹೆಚ್ಚು ಸಮಾಜ ಸೇವೆ ಮಾಡಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಶುಕ್ರವಾರ ಹೇಳಿದರು. ಇದೇ ವೇಳೆ, ‘ಇದು ಪೈಪೋಟಿಯ ವಿಷಯ ಎಂಬುದಾಗಿ ಭಾವಿಸಬಾರದು’ ಎಂದೂ ತಿಳಿಸಿದರು.

ಆರ್‌ಎಸ್‌ಎಸ್‌ ಅಂಗಸಂಸ್ಥೆ ಕೇಶವ್‌ ವಿದ್ಯಾಪೀಠ ಇಲ್ಲಿನ ಜಾಮಡೋಲಿಯಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ರಾಷ್ಟ್ರೀಯ ಸೇವಾ ಸಂಗಂ’ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಮಾಜ ಸೇವೆಯ ವಿಷಯ ಬಂದಾಗ ದೇಶದ ವಿಚಾರವಂತರು ಕ್ರೈಸ್ತ ಮಿಷನರಿಗಳ ಹೆಸರು ಉಲ್ಲೇಖಿಸುತ್ತಾರೆ. ಮಿಷನರಿ ಸಂಘಟನೆಗಳು ಜಗತ್ತಿನಾದ್ಯಂತ ಹಲವಾರು ಶಾಲೆಗಳು, ಆಸ್ಪತ್ರೆಗಳು, ಸಂಘ–ಸಂಸ್ಥೆಗಳನ್ನು ನಡೆಸುತ್ತಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಹಿಂದೂ ಸಂತರು ಏನು ಮಾಡುತ್ತಾರೆ? ಇದೇ ಆಲೋಚನೆಯಲ್ಲಿ ಚೆನ್ನೈನಲ್ಲಿ ಹಿಂದೂ ಸೇವಾ ಜಾತ್ರೆ ಆಯೋಜಿಸಲಾಗಿತ್ತು. ಕನ್ನಡ, ತೆಲುಗು, ಮಲಯಾಳ, ತಮಿಳು ಭಾಷಾ ಪ್ರಾಂತ್ಯಗಳಲ್ಲಿ ಆಚಾರ್ಯರು, ಮುನಿಗಳು, ಸನ್ಯಾಸಿಗಳು ಮಾಡಿದ ಸಮಾಜ ಸೇವೆಯು ಮಿಷನರಿಗಳ ಸಮಾಜಸೇವೆಗಿಂತ ಬಹುದೊಡ್ಡದು ಎಂಬುದು ತಿಳಿಯಿತು’ ಎಂದು ಅವರು ಹೇಳಿದರು.

ADVERTISEMENT

‘ಆದರೆ ಯಾರು ಹೆಚ್ಚು, ಯಾರು ಕಡಿಮೆ ಎಂಬ ಸ್ಪರ್ಧೆಯ ಬಗ್ಗೆ ನಾನಿಲ್ಲಿ ಮಾತನಾಡುತ್ತಿಲ್ಲ. ಇದು ಸೇವೆಯನ್ನು ಅಳೆಯುವ ಮಾನದಂಡವೂ ಅಲ್ಲ. ಸೇವೆ ಎಂಬುದು ಸ್ಪರ್ಧೆಯ ವಿಷಯವಲ್ಲ. ಅದು ಮಾನವೀಯತೆಯ ಸ್ವಾಭಾವಿಕ ಅಭಿವ್ಯಕ್ತಿ’ ಎಂದು ಹೇಳಿದರು.

‘ಪ್ರತಿಯೊಬ್ಬರೂ ಸಮಾನರು. ನಾವೆಲ್ಲರೂ ಈ ಸಮಾಜದ ಭಾಗ. ಎಲ್ಲರೂ ಒಂದಾಗಬೇಕು. ಒಂದಾಗದಿದ್ದರೆ ನಾವು ಅಪೂರ್ಣರಾಗುತ್ತೇವೆ’ ಎಂದು ತಿಳಿಸಿದರು.

‘ಸಮಾಜದಲ್ಲಿ ಅಸಮಾನತೆ ಇದೆ. ಅದರ ಅಗತ್ಯವಿಲ್ಲ. ದುರದೃಷ್ಟವಶಾತ್‌ ಈ ಪರಿಸ್ಥಿತಿ ಬಂದಿದೆ. ಇಂಥ ಪರಿಸ್ಥಿತಿ, ಇಂಥ ಅಸಮಾನತೆ ನಮಗೆ ಬೇಡ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.