ADVERTISEMENT

ಸುಳ್ಳು ಸಂದೇಶಗಳಿಗೆ ಕಡಿವಾಣ: ವಾಟ್ಸ್ ಆ್ಯಪ್‌ ಭರವಸೆ

ಕೇಂದ್ರ ಸರ್ಕಾರದ ಎಚ್ಚರಿಕೆಗೆ ಇಮೇಲ್‌ನಲ್ಲಿ ಪ್ರತಿಕ್ರಿಯೆ

ಪಿಟಿಐ
Published 4 ಜುಲೈ 2018, 12:23 IST
Last Updated 4 ಜುಲೈ 2018, 12:23 IST
   

ನವದೆಹಲಿ: ‘ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುವ ವದಂತಿಗಳು ಮತ್ತು ಪ್ರಚೋದನಾಕಾರಿ ಸಂದೇಶಗಳಿಂದ ಉಂಟಾಗುತ್ತಿರುವ ಹಿಂಸಾ ಘಟನೆಗಳು ನಮಗೂ ಗಾಬರಿ ಮೂಡಿಸಿವೆ. ಈ ಸಮಸ್ಯೆ ನಿಭಾಯಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ವಾ‌ಟ್ಸ್‌ ಆ್ಯಪ್‌ ಕಂಪನಿ ತಿಳಿಸಿದೆ.

ಅಮಾಯಕರ ಹತ್ಯೆಗಳಿಗೆ ಪ್ರಚೋದನೆ ನೀಡುವಂತಹ ಸುಳ್ಳು ಮತ್ತು ಬೇಜವಾಬ್ದಾರಿಯ ಸಂದೇಶ ಹರಡುವುದನ್ನು ತಡೆಯಲು ತುರ್ತು ಕಡಿವಾಣ ಹಾಕುವಂತೆ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಜುಲೈ 3ರಂದು ವಾಟ್ಸ್‌ಆ್ಯಪ್‌ ಸಂಸ್ಥೆಗೆ ಎಚ್ಚರಿಕೆ ನೀಡಿ, ಪತ್ರ ಬರೆದಿತ್ತು.

ಇದಕ್ಕೆ ಸ್ಪಂದಿಸಿರುವ ವಾಟ್ಸ್‌ ಆ್ಯಪ್‌ ಕಂಪನಿಯು, ‘ತನ್ನ ಸಾಮಾಜಿಕ ತಾಣದ ವೇದಿಕೆಯಲ್ಲಿ ಹರಿದಾಡುವ ಬೇಜವಾಬ್ದಾರಿ ಮತ್ತು ಪ್ರಚೋದನಾಕಾರಿ ಸಂದೇಶಗಳು ಗುಂಪು ಹತ್ಯೆಗೆ ಕಾರಣವಾಗುತ್ತಿರುವುದು ನಮ್ಮನ್ನೂ ದಂಗುಬಡಿಸಿದೆ. ಸರ್ಕಾರ ಪ್ರಸ್ತಾಪಿಸಿರುವ ವಿಷಯಗಳಿಗೆ ತ್ವರಿತವಾಗಿ ಸ್ಪಂದಿಸುತ್ತೇವೆ. ಇದಕ್ಕೆ ನಾಗರಿಕರು ಮತ್ತು ಸರ್ಕಾರದ ಸಹಭಾಗಿತ್ವ ಬಯಸುತ್ತೇವೆ’ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಬರೆದಿರುವ ಇಮೇಲ್‌ ಪತ್ರದಲ್ಲಿ ತಿಳಿಸಿದೆ.

ADVERTISEMENT

‘ಜನರ ಸುರಕ್ಷತೆಗೆ ವಾಟ್ಸ್‌ ಆ್ಯಪ್‌ ಅಪಾರ ಕಾಳಜಿ ಹೊಂದಿದೆ. ಸುರಕ್ಷತೆ ದೃಷ್ಟಿಯಲ್ಲಿಟ್ಟುಕೊಂಡೇ ಆ್ಯಪ್‌ ಸಿದ್ಧಪಡಿಸಿದ್ದೇವೆ. ಅನಗತ್ಯ ಮಾಹಿತಿಗಳನ್ನು ಹರಡದಂತೆ ತಡೆಯಲು ಕೆಲವೊಂದು ಬದಲಾವಣೆಗಳನ್ನು ತಂದಿದ್ದೇವೆ’ ಎಂದು ತಿಳಿಸಿದೆ.

ಕರ್ನಾಟಕ, ಮಹಾರಾಷ್ಟ್ರ, ತ್ರಿಪುರಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಇತ್ತೀಚೆಗೆ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ ಮಕ್ಕಳ ಕಳ್ಳತನದ ಸುಳ್ಳು ಸಂದೇಶಗಳು ಅನೇಕ ಮುಗ್ಧ ಜೀವಗಳನ್ನು ಬಲಿ ಪಡೆದಿವೆ. ಹಿಂಸಾತ್ಮಕ ಘಟನೆಗಳು ನಡೆದಾಗ ಕಂಪನಿ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವದಿಂದ ನುಣುಚಿಕೊಳ್ಳಲಾಗದು. ದುಷ್ಕೃತ್ಯಗಳಿಗೆ ಅವಕಾಶ ಕೊಡುವ ವೇದಿಕೆಯಾಗಬಾರದು ಎಂದು ಸರ್ಕಾರ ಎಚ್ಚರಿಕೆ ನೀಡಿತ್ತು.

***

ಸರ್ಕಾರ, ನಾಗರಿಕ ಸಮಾಜ ಹಾಗೂ ತಂತ್ರಜ್ಞಾನ ಸಂಸ್ಥೆಗಳು ಒಟ್ಟಾಗಿ ಈ ಸಮಸ್ಯೆ ನಿಭಾಯಿಸಬೇಕೆಂದು ನಾವು ನಂಬಿದ್ದೇವೆ
–ವಾಟ್ಸ್‌ ಆ್ಯಪ್‌ ಕಂಪನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.