ADVERTISEMENT

ಮಾನವೀಯ ಪರಿಗಣನೆಗಳು ಕನಿಷ್ಠ ಶಿಕ್ಷೆ ಮೀರುವಂತಿಲ್ಲ: ಸುಪ್ರೀಂ ಕೋರ್ಟ್‌

ಪಿಟಿಐ
Published 11 ಡಿಸೆಂಬರ್ 2025, 16:31 IST
Last Updated 11 ಡಿಸೆಂಬರ್ 2025, 16:31 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಮಾನವೀಯ ನೆಲೆಗಟ್ಟಿನ ಪರಿಶೀಲನೆಗಳು ಶಾಸನಬದ್ಧ ಕನಿಷ್ಠ ಶಿಕ್ಷೆಯ ಮಿತಿಯನ್ನು ಮೀರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ಮಾದಕ ವಸ್ತು ಪ್ರಕರಣವೊಂದರಲ್ಲಿ ಮಹಿಳೆಗೆ ವಿಧಿಸಲಾದ ಶಿಕ್ಷೆಯ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಮದ್ರಾಸ್‌ ಹೈಕೋರ್ಟ್‌ 2024ರ ಜೂನ್‌ನಲ್ಲಿ ಹೊರಡಿಸಿದ್ದ ತೀರ್ಪನ್ನು ಪ್ರಶ್ನಿಸಿ ಮಹಿಳೆ ಮೇಲ್ಮನವಿ ಸಲ್ಲಿಸಿದ್ದರು.

ADVERTISEMENT

ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್‌) ಕಾಯ್ದೆ–1985ರ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮಹಿಳೆಗೆ ವಿಧಿಸಲಾಗಿರುವ 10 ವರ್ಷಗಳ ಜೈಲು ಶಿಕ್ಷೆಯನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಸಂಜಯ್‌ ಕರೋಲ್‌ ಮತ್ತು ವಿಫುಲ್‌ ಎಂ. ಪಾಂಚೋಲಿ ಅವರ ಪೀಠ ಮಹಿಳೆಯ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿತು.

‘ನನಗೆ ಯಾವುದೇ ಅಪರಾಧದ ಹಿನ್ನೆಲೆ ಇಲ್ಲ, ಅಲ್ಲದೆ, ಅಪ್ರಾಪ್ತ ವಯಸ್ಸಿನ ಮಗುವಿನ ಕಾಳಜಿ ವಹಿಸಬೇಕಿದೆ. ಹೀಗಾಗಿ ಮಾನವೀಯತೆ ಆಧಾರದ ಮೇಲೆ ಪ್ರಕರಣವನ್ನು ಪರಿಗಣಿಸಬೇಕು’ ಎಂದು ಮಹಿಳೆ ಮೇಲ್ಮನವಿ ಸಲ್ಲಿಸಿದ್ದರು.

ಪ್ರಕರಣದ ವಿವರ:

ಮೇಲ್ಮನವಿ ಅರ್ಜಿ ಸಲ್ಲಿಸಿದ ಮಹಿಳೆ ಮತ್ತು ಆಕೆಯ ಪತಿ 2019ರ ಸೆಪ್ಟೆಂಬರ್‌ನಲ್ಲಿ ಸಾಗುತ್ತಿದ್ದ ವಾಹನದಲ್ಲಿ 23.5 ಕೆ.ಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಸಂಬಂಧ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ವಿಚಾರಣಾ ನ್ಯಾಯಾಲಯವು ಎನ್‌ಡಿಪಿಎಸ್‌ ಕಾಯ್ದೆಯಡಿ ಇಬ್ಬರನ್ನೂ ಅಪರಾಧಿಗಳೆಂದು ಘೋಷಿಸಿ, 10 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿತ್ತು. 

ಈ ಆದೇಶ ಪ್ರಶ್ನಿಸಿ ಅಪರಾಧಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿತ್ತು. ಅದನ್ನು ಪ್ರಶ್ನಿಸಿ ಮಹಿಳೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.