ADVERTISEMENT

ಹೈದರಾಬಾದ್‌: ರಸ್ತೆಯಲ್ಲಿ ಯುವತಿಯನ್ನು ಅಡ್ಡಗಟ್ಟಿ ವಿವಸ್ತ್ರಗೊಳಿಸಿದ ದುಷ್ಕರ್ಮಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಆಗಸ್ಟ್ 2023, 17:19 IST
Last Updated 8 ಆಗಸ್ಟ್ 2023, 17:19 IST
   

ಹೈದರಾಬಾದ್: ದುಷ್ಕರ್ಮಿಯೊಬ್ಬ ರಸ್ತೆಯಲ್ಲಿ ಯುವತಿಯನ್ನು ಅಡ್ಡಗಟ್ಟಿ ವಿವಸ್ತ್ರಗೊಳಿಸಿರುವ ಘಟನೆ ಹೈದರಾಬಾದ್‌ನ ಜವಾಹರ್ ನಗರ ಪ್ರದೇಶದಲ್ಲಿ ನಡೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸೆಕ್ಯುರಿಟಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಯುವತಿ ಬಟ್ಟೆ ಅಂಗಡಿಯಿಂದ ಹಿಂದಿರುಗುತ್ತಿದ್ದಾಗ ಅಡ್ಡಗಟ್ಟಿದ ವ್ಯಕ್ತಿ ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಅದಕ್ಕೆ ಯುವತಿ ಪ್ರತಿರೋಧ ಒಡ್ಡಿದಾಗ ಆಕ್ರಮಣಕಾರಿಯಾಗಿ ವರ್ತಿಸಿದ ಆತ, ರಸ್ತೆಯಲ್ಲಿಯೇ ಯುವತಯ ಬಟ್ಟೆ ಕಿತ್ತೆಸೆದು, ಅವುಗಳನ್ನು ಹರಿದು ಹಾಕಿದ್ದಾನೆ.

ADVERTISEMENT

ಈ ವೇಳೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮತ್ತೊಬ್ಬ ಮಹಿಳೆ ಆ ವ್ಯಕ್ತಿಯನ್ನು ತಡೆದು ನಿಲ್ಲಿಸಲು ಯತ್ನಿಸಿದ್ದು, ಆಕೆ ಜೊತೆಯೂ ದುರ್ವರ್ತನೆ ತೋರಿದ್ದಾನೆ. ಈ ನಡುವೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ವಿವಸ್ತ್ರಗೊಂಡು ಕೆಲಕಾಲ ರಸ್ತೆಯಲ್ಲೇ ದಿಕ್ಕು ಕಾಣದೆ ನಿಂತಿದ್ದ ಯುವತಿಯ ನೆರವಿಗೆ ಬಂದ ಕೆಲ ಮಹಿಳೆಯರು ಪ್ಲಾಸ್ಟಿಕ್ ಪೇಪರನ್ನು ನೀಡಿದ್ದಾರೆ.

ಮಗ ಇಂತಹ ಹೀನ ಕೃತ್ಯ ಎಸಗುತ್ತಿದ್ದರೂ ಆತನ ಜೊತೆಗಿದ್ದ ತಾಯಿ ತಡೆಯಲು ಯತ್ನಿಸಲಿಲ್ಲ ಎಂದು ತಿಳಿದುಬಂದಿದೆ. ಐಪಿಸಿ ಸೆಕ್ಷನ್ 354(ಬಿ), 323, 506 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡಿದ ಘಟನೆ ನಡೆದು ಎರಡು ತಿಂಗಳ ನಂತರ ಹೈದರಾಬಾದ್‌ನಲ್ಲಿ ಮತ್ತೆ ಅಂತಹದ್ದೇ ಘಟನೆ ನಡೆದಿರುವುದು ನಾಗರಿಕ ಸಮಾಜ ತಲೆತಗ್ಗಿಸಬೇಕಿದೆ. ದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆ ಖಚಿತಪಡಿಸಬೇಕಿದೆ ಎಂದು ಸ್ಥಳೀಯ ಮಹಿಳೆಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.