ADVERTISEMENT

ಕೇರಳದಲ್ಲಿ ಕ್ವಾರೆಂಟೈನ್ ಸೂಚನೆ ಉಲ್ಲಂಘಿಸಿದ ಐಎಎಸ್ ಅಧಿಕಾರಿ ಅಮಾನತು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 13:24 IST
Last Updated 27 ಮಾರ್ಚ್ 2020, 13:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಲ್ಲಂ: ಮಾರ್ಚ್ 18ರಂದು ಸಿಂಗಾಪುರ್‌ನಿಂದ ವಾಪಸ್‌ ಆಗಿದ್ದ ಕೇರಳದ ಕೊಲ್ಲಂ ಜಿಲ್ಲೆಯ ಉಪ ಜಿಲ್ಲಾಧಿಕಾರಿ ಅನುಪಮ್ ಮಿಶ್ರಾ ಕ್ವಾರೆಂಟೈನ್ ಸೂಚನೆ ಉಲ್ಲಂಘಿಸಿ ಊರಿಗೆ ತೆರಳಿರುವ ಘಟನೆ ನಡೆದಿದೆ.

ಕ್ವಾರೆಂಟೈನ್‌ನಲ್ಲಿದ್ದ ಈ ಐಎಎಸ್ ಅಧಿಕಾರಿ ಗುರುವಾರ ಸಂಜೆ ತಮ್ಮ ಅಧಿಕೃತ ನಿವಾಸದಲ್ಲಿಇಲ್ಲದೇ ಇರುವುದು ಆರೋಗ್ಯ ಕಾರ್ಯಕರ್ತರ ಗಮನಕ್ಕೆ ಬಂದಿದೆ. ತಕ್ಷಣವೇ ಮಿಶ್ರಾ ಅವರಿಗೆ ಫೋನ್ ಮಾಡಿ ವಿಚಾರಿಸಿದಾಗತಾನು ಬೆಂಗಳೂರಿನಲ್ಲಿ ವೈದ್ಯರಾಗಿರುವ ಸಹೋದರನ ಜತೆ ಕ್ವಾರೆಂಟೈನ್‌ನಲ್ಲಿದ್ದೇನೆ ಎಂದಿದ್ದರು. ಆದರೆ ಪೊಲೀಸರು ಮೊಬೈಲ್ ಲೊಕೇಷನ್ ಪತ್ತೆ ಹಚ್ಚಿದಾಗ ಮಿಶ್ರಾ ಕಾನ್ಪುರದಲ್ಲಿರುವುದು ತಿಳಿದುಬಂದಿದೆ.

ಕೊಲ್ಲಂ ಜಿಲ್ಲಾಧಿಕಾರಿ ಬಿ. ಅಬ್ದುಲ್ ನಾಸರ್ ಈ ವಿಷಯವನ್ನು ಕೇರಳ ಸರ್ಕಾರದ ಗಮನಕ್ಕೆ ತಂದಿದ್ದು, ಮಿಶ್ರಾ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.ಯಾವುದೇ ಅಧಿಕಾರಿಗಳಿಗೆ ವಿಷಯ ತಿಳಿಸದೆ, ಅನುಮತಿಪಡೆಯದೆ ಮಿಶ್ರಾ ಹೊರಗೆ ಹೋಗಿದ್ದಾರೆ. ಕ್ವಾರೆಂಟೈನ್‌ನಲ್ಲಿರುವಾಗ ಈ ರೀತಿ ನಿಯಮ ಉಲ್ಲಂಘಿಸುವುದು ಅಪರಾಧ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದರು.

ADVERTISEMENT

ಆದಾಗ್ಯೂ, ಊರಿನಲ್ಲಿದ್ದರೂ ಮಿಶ್ರಾ ಅವರು ಕ್ವಾರೆಂಟೈನ್‌‌ನಲ್ಲಿರುವುದಾಗಿ ಹೇಳಿದ್ದಾರೆ.ಇಲ್ಲಿಯವರೆಗೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣ ವರದಿಯಾಗಿಲ್ಲ.

ಕ್ವಾರೆಂಟೈನ್‌ನಲ್ಲಿರುವ ವ್ಯಕ್ತಿಗಳು ಸೂಚನೆ ಉಲ್ಲಂಘಿಸುತ್ತಿರುವ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಕೇರಳದಲ್ಲಿ ಕ್ವಾರೆಂಟೈನ್‌ನಲ್ಲಿರಲು ಸೂಚಿಸಿರುವ ವ್ಯಕ್ತಿಗಳ ಮನೆಗೆ ಸ್ಟಿಕ್ಕರ್ ಅಂಟಿಸಲಾಗುತ್ತಿದೆ.
ಕ್ವಾರೆಂಟೈನ್ ಅಥವಾ ಐಸೋಲೇಷನ್‌ನಲ್ಲಿರುವ ವ್ಯಕ್ತಿಗಳು ಸೂಚನೆ ಉಲ್ಲಂಘಿಸುತ್ತಿರುವುದು ಗಂಭೀರ ಅಪರಾಧ.ಆರೋಗ್ಯ ಕಾರ್ಯಕರ್ತರ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಸ್ವಯಂ ರಕ್ಷಣೆ ಮತ್ತು ಸಮಾಜವನ್ನು ರಕ್ಷಿಸುವ ಹೊಣೆ ಎಲ್ಲರದ್ದೂ ಆಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ ಜನರಲ್ಲಿ ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.