ADVERTISEMENT

ಹೈಕೋರ್ಟ್‌ ಆದೇಶ ಪ್ರಶ್ನಿಸಿ ಐಎಎಸ್‌ ಅಧಿಕಾರಿ ಸುಪ್ರೀಂ ಕೋರ್ಟ್‌ಗೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 3:19 IST
Last Updated 15 ಜುಲೈ 2022, 3:19 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್‌ ಜಾಮೀನು ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್‌ ನ್ಯಾಯಮೂರ್ತಿಯವರು ನೀಡಿರುವ ಅಭಿಪ್ರಾಯ ಹಾಗೂ ಆದೇಶಗಳನ್ನು ಪ್ರಶ್ನಿಸಿ ಐಎಎಸ್‌ ಅಧಿಕಾರಿ ಜೆ.ಮಂಜುನಾಥ್ ಅವರು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದಾರೆ.

ವಕೀಲ ಸಂಜಯ್‌ ಎಂ.ನುಲಿ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಮಂಜುನಾಥ್‌, ‘ನನ್ನ ವಿರುದ್ಧ ಪದೇ ಪದೇ ಅನಗತ್ಯವಾಗಿ ಟೀಕೆಗಳನ್ನು ಮಾಡಲಾಗಿದೆ. ನೈಸರ್ಗಿಕ ನ್ಯಾಯ ತತ್ವದಡಿ ವಾದ ಮಂಡಿಸಲು ನ್ಯಾಯಾಲಯ ಅವಕಾಶ ನೀಡಿಲ್ಲ’ ಎಂದೂ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠದ ಎದುರು ಗುರುವಾರ ಈ ಅರ್ಜಿಯ ಬಗ್ಗೆ ಹಿರಿಯ ವಕೀಲ ಎಸ್‌.ನಾಗಮುತ್ತು ಪ್ರಸ್ತಾಪಿಸಿದರು. ಹೈಕೋರ್ಟ್‌ ನ್ಯಾಯಮೂರ್ತಿಯವರ ಅಭಿಪ್ರಾಯ ಹಾಗೂ ಆದೇಶದ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಸೀಮಂತ್‌ ಕುಮಾರ್‌ ಸಿಂಗ್‌ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ಸಹ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಈ ಎರಡು ಅರ್ಜಿಗಳ ವಿಚಾರಣೆಯ ವೇಳೆಗೆ ಮಂಜುನಾಥ್ ಅವರ ಅರ್ಜಿಯನ್ನೂ ಕೈಗೆತ್ತಿಕೊಳ್ಳಲು ಪೀಠ ಸಮ್ಮತಿ ಸೂಚಿಸಿತು.

ADVERTISEMENT

‘ಹೈಕೋರ್ಟ್‌ ನ್ಯಾಯಮೂರ್ತಿಯವರು ಅಧಿಕಾರ ವ್ಯಾಪ್ತಿ ಮೀರಿ ಅಭಿಪ್ರಾಯಗಳನ್ನು ನೀಡಿದ್ದಾರೆ. ಇಂತಹ ಅಭಿ‍ಪ್ರಾಯಗಳಿಂದ ನ್ಯಾಯಯುತ ತನಿಖೆ ಮೇಲೂ ಪರಿಣಾಮ ಬೀರುತ್ತದೆ’ ಎಂದು ಮಂಜುನಾಥ್‌ ಅವರು ಅರ್ಜಿಯಲ್ಲಿ ಹೇಳಿದ್ದಾರೆ.

ಜಮೀನು ಮಾಲೀಕತ್ವದ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅರ್ಜಿದಾರರ ಪರ ಆದೇಶ ನೀಡಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ಲಂಚ ಪಡೆದಿರುವ ಆರೋಪ ಎದುರಿಸುತ್ತಿರುವ ಜೆ. ಮಂಜುನಾಥ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಜುಲೈ 4ರಂದು ಬಂಧಿಸಿದ್ದರು. ಅವರ ಜಾಮೀನು ಅರ್ಜಿಯನ್ನು ಸೆಷನ್ಸ್‌ ನ್ಯಾಯಾಲಯವು ಜುಲೈ 11ರಂದು ವಜಾ ಮಾಡಿತ್ತು. ‘ಸ್ವಯಂ ಎಸಿಬಿಯೇ ಅತಿದೊಡ್ಡ ಭ್ರಷ್ಟರ ಕೂಪವಾಗಿದೆ. ಇದರ ಮುಖ್ಯಸ್ಥ ಎಡಿಜಿಪಿಯೇ ಕಳಂಕಿತ ಅಧಿಕಾರಿ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣಕ್ಕೆ ವರ್ಗಾವಣೆ ಬೆದರಿಕೆ ಬಂದಿದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಚ್.ಡಿ. ಸಂದೇಶ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.