
ನವದೆಹಲಿ: ಕಲಬೆರಕೆ ಪೆಟ್ರೋಲ್ ಅಥವಾ ಸೀಮೆಎಣ್ಣೆ ಮಿಶ್ರಣ ಮತ್ತು ನೀರಿನಲ್ಲಿ ಸೇರಿದ ತೈಲದ ಅಂಶವನ್ನು ಪತ್ತೆ ಮಾಡಬಲ್ಲ ಹೊಸ ವಸ್ತುವೊಂದನ್ನು ಗುವಾಹಟಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಸ್ತುವು ನೀರಿನಲ್ಲಿರುವ ತೈಲದ ಅಂಶ ಹೀರಿಕೊಳ್ಳುವ ಮತ್ತು ಘನೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಸಂಶೋಧನೆಯ ಅಂಶಗಳನ್ನು ಪ್ರತಿಷ್ಠಿತ ‘ಕೆಮಿಕಲ್ ಎಂಜಿನಿಯರಿಂಗ್’ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಗೋಪಾಲ್ ದಾಸ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
‘ತೈಲ ಟ್ಯಾಂಕರ್‌ಗಳ ಸೋರಿಕೆ ಅಂಕಿಅಂಶ–2024ರ ಪ್ರಕಾರ ಜಾಗತಿಕವಾಗಿ ಸುಮಾರು 10,000 ಟನ್‌ನಷ್ಟು ತೈಲವು ಸಮುದ್ರ ಮತ್ತು ಸಾಗರವನ್ನು ಸೇರುತ್ತಿದೆ. ಇದು ಜಾಗತಿಕವಾಗಿ ನೈಸರ್ಗಿಕ ವಿಕೋಪವಾಗಿ ಪರಿಣಮಿಸುತ್ತಿದೆ. ಸಾಗರ ಜೀವಿಗಳು, ಕರಾವಳಿ ಪ್ರದೇಶ ಮತ್ತು ಇವುಗಳನ್ನು ಅವಲಂಬಿಸಿರುವ ಜನಜೀವನದ ಮೇಲೂ ಹಾನಿ ಉಂಟುಮಾಡುತ್ತಿದೆ’ ಎಂದು ಹೇಳಿದ್ದಾರೆ.
‘ಸದ್ಯ ಅನುಸರಿಸುತ್ತಿರುವ ರಾಸಾಯನಿಕ ವಿಧಾನ ಅಥವಾ ತೈಲವನ್ನು ಉರಿಸುವ ವಿಧಾನಗಳು ಎರಡನೇ ಹಂತದ ಮಾಲಿನ್ಯ ಉಂಟುಮಾಡುತ್ತವೆ. ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ಫೇಸ್ ಸೆಲೆಕ್ಟೀವ್ ಆರ್ಗೊಜಿಲೇಟರ್ (ಪಿಎಸ್‌ಓಜಿ)’ ಅಣು (ಜೆಲ್ ಮಾದರಿಯ ಸಣ್ಣ ಕಣ) ಸುರಕ್ಷಿತ ವಸ್ತುವಾಗಿದ್ದು, ನೀರಿನಲ್ಲಿ ಸೇರಿದ ತೈಲವನ್ನು ಘನೀಕರಿಸುತ್ತದೆ’ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಪೆಟ್ರೋಲ್‌ಗೆ ಸೀಮೆಎಣ್ಣೆ ಮಿಶ್ರಣ ಮಾಡಿ ಕೆಲವರು ಬಳಸುತ್ತಿದ್ದಾರೆ. ಇದು ಸ್ಫೋಟದಂತಹ ಅನಾಹುತಕ್ಕೂ ಕಾರಣವಾಗುತ್ತಿದೆ. ತೈಲ ಕಲಬೆರಕೆ ಪತ್ತೆಹಚ್ಚಲು ಜಿಲೇಟರ್ ಮಾಲೆಕ್ಯೂಲ್ (ಜೆಲ್ ಮಾದರಿಯ ಸಣ್ಣ ಕಣ) ನೆರವಾಗಲಿದೆ. ಇದರ ದಕ್ಷತೆ ಇನ್ನಷ್ಟು ಹೆಚ್ಚಿಸುವ ಯತ್ನ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.