ADVERTISEMENT

ಐಎಂಎ ₹2,800 ಕೋಟಿ ವಂಚನೆ: ಪೂರ್ಣ ಹಣ ವಾಪಸ್‌ ಇಲ್ಲ?

ಜಪ್ತಿ ಆಸ್ತಿ ಮೌಲ್ಯ ₹450 ಕೋಟಿ

ರಾಜೇಶ್ ರೈ ಚಟ್ಲ
Published 10 ಫೆಬ್ರುವರಿ 2020, 19:45 IST
Last Updated 10 ಫೆಬ್ರುವರಿ 2020, 19:45 IST
ಐಎಂಎ
ಐಎಂಎ   

ಬೆಂಗಳೂರು: ಐಎಂಎ (ಐ- ಮಾನಿಟರಿ ಅಡ್ವೈಸರಿ) ಕಂಪನಿಯಲ್ಲಿ ಲಕ್ಷಾಂತರ ಮೊತ್ತ ಹೂಡಿಕೆ ಮಾಡಿ ಹಣ ಕಳೆದುಕೊಂಡವರಿಗೆ ಶೇ 20ರಷ್ಟೂ ಮರಳಿ ಸಿಗುವುದು ಅನುಮಾನ!

70 ಸಾವಿರ ಗ್ರಾಹಕರಿಗೆ ಕಂಪನಿ ₹ 2,800 ಕೋಟಿ ವಂಚನೆ ಮಾಡಿರುವುದನ್ನು ಸಿಬಿಐ ಪತ್ತೆ ಹಚ್ಚಿದೆ. ಆದರೆ, ಪ್ರಕರಣ ಬಯಲಿಗೆ ಬಂದ ಬಳಿಕ ವಶಪಡಿಸಿಕೊಂಡ ಕಂಪನಿಗೆ ಸೇರಿದ ಚಿನ್ನಾಭರಣ ಮತ್ತು ಆಸ್ತಿಯ ಮೌಲ್ಯ ಕೇವಲ ₹ 450 ಕೋಟಿ. ಅಲ್ಲದೆ, ಜಪ್ತಿ ಮಾಡಿದ ಬಹುತೇಕ ಆಸ್ತಿಗಳು ವಿವಾದದಲ್ಲಿದೆ.

ಕಂಪನಿಗೆ ಸೇರಿದ ಸ್ಥಿರ–ಚರಾಸ್ತಿಯನ್ನು ಹರಾಜು ಹಾಕಿ ವಂಚನೆಗೊಳಗಾದವರಿಗೆ ಹಂಚುವ ಪ್ರಕ್ರಿಯೆ ನಡೆಸಲು ರಾಜ್ಯ ಸರ್ಕಾರ ರಚಿಸಿರುವ ಸಕ್ಷಮ ಪ್ರಾಧಿಕಾರ, ಈ ಬಗ್ಗೆ ಹೈಕೋರ್ಟ್‌ನಿಂದ ಸಲಹೆ ಪಡೆಯಲು ನಿರ್ಧರಿಸಿದೆ. ಸಣ್ಣ ಸಣ್ಣ ಹೂಡಿಕೆದಾರರಿಗೆ ಪೂರ್ಣ ಹಣವನ್ನು ನೀಡಲು ಅಥವಾ ಹರಾಜು ಹಾಕಿ ಬಂದ ಒಟ್ಟು ಹಣವನ್ನು ಹೂಡಿಕೆ ಮಾಡಿದ ಮೊತ್ತಕ್ಕೆ ಅನುಗುಣವಾಗಿ ಶೇಕಡವಾರು ಪ್ರಮಾಣದಲ್ಲಿ ಎಲ್ಲರಿಗೂ ವಿತರಿಸುವ ಬಗ್ಗೆ ಪ್ರಾಧಿಕಾರ ಚಿಂತನೆ ನಡೆಸಿದೆ.

ADVERTISEMENT

ಪೊರೆನ್ಸಿಕ್‌ ಆಡಿಟ್‌ ಸಂಸ್ಥೆಯಾದ ‘ಡೆಲೋಯಿಟ್’ ಮೂಲಕ ಐಎಂಎ ಕಂಪನಿಯ ಡೇಟಾ ಬೇಸ್ ಅನ್ನು ಸಿಬಿಐ ಲೆಕ್ಕ ಪರಿಶೋಧನೆಗೆ ಒಳಪಡಿಸಿದೆ. ಎರಡು ತಿಂಗಳಿಂದ ಕಂಪನಿಯ ವ್ಯವಹಾರಗಳನ್ನು ಈ ಸಂಸ್ಥೆ ಅಧ್ಯಯನ ಮಾಡುತ್ತಿದೆ. ಷೇರುದಾರರು ಕಂಪನಿಯಲ್ಲಿ ಹೂಡಿಕೆ ಮಾಡಿದ್ದ ಹಣ ಯಾವ ರೀತಿ ವೆಚ್ಚವಾಗಿದೆ, ಯಾರ ಖಾತೆಗಳಿಗೆ ಎಷ್ಟು ಹಣ ಜಮೆ ಆಗಿದೆ, ದುರ್ಬಳಕೆಯಾದ ಹಣ ಎಷ್ಟು ಮುಂತಾದ ಮಾಹಿತಿಗಳನ್ನು ಈ ಸಂಸ್ಥೆ ಈಗಾಗಲೇ ಸಿಬಿಐಗೆ ನೀಡಿದೆ ಎಂದು ಮೂಲಗಳು ಹೇಳಿವೆ.

ಈ ಬಹುಕೋಟಿ ವಂಚನೆ ಪ್ರಕರಣ ಬಯಲಾಗುತ್ತಿದ್ದಂತೆ, ವಂಚನೆಗೊಳಗಾದ 55 ಸಾವಿರಕ್ಕೂ ಹೆಚ್ಚು ಷೇರುದಾರರು ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಬಿಐ, ಭ್ರಷ್ಟಾಚಾರ, ಅಪರಾಧಿಕ ಒಳಸಂಚಿನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವವರ ವೈಯಕ್ತಿಕ ಡೈರಿ, ಕಂಪ್ಯೂಟರ್‌, ಪೆನ್‌ ಡ್ರೈವ್‌ಗಳಲ್ಲಿರುವ ಮಾಹಿತಿಗಳನ್ನು ಕಲೆಹಾಕಿ ವಿಚಾರಣೆ ನಡೆಸುತ್ತಿದೆ. ಮಾರ್ಚ್‌ ಅಂತ್ಯದ ವೇಳೆಗೆ ತನಿಖೆ ಅಂತಿಮ ಹಂತಕ್ಕೆ ಬರಬಹುದು ಎಂದೂ ಮೂಲಗಳು ತಿಳಿಸಿವೆ.

ಕ್ಲೇಮ್‌ ಅರ್ಜಿ ಸಲ್ಲಿಕೆಗೆ ‘ಆ್ಯಪ್‌‘

ವಂಚನೆಗೆ ಒಳಗಾದವರು ತಮ್ಮ ಹಣ ಕ್ಲೇಮ್ ಮಾಡಲು ಅನುಕೂಲವಾಗುವಂತೆ ಸಕ್ಷಮ ಪ್ರಾಧಿಕಾರವು ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಿದೆ. ಇದಕ್ಕಾಗಿ ಸೆಂಟರ್‌ ಫಾರ್‌ ಇ– ಗವರ್ನೆನ್ಸ್‌ ಆ್ಯಪ್‌ ಅಭಿವೃದ್ಧಿಪಡಿಸುತ್ತಿದೆ. ಈ ಆ್ಯಪ್‌ ಮೂಲಕ ಆಧಾರ್‌ ಸಂಖ್ಯೆ, ಐಎಂಎಯಲ್ಲಿ ಹಣ ತೊಡಗಿಸಿದ ದಾಖಲೆಗಳ ಮಾಹಿತಿ ಮತ್ತು ಪಾನ್‌ ಸಂಖ್ಯೆ ನಮೂದಿಸಿ ಸಂತ್ರಸ್ತರು ಅರ್ಜಿ ಸಲ್ಲಿಸಬೇಕು. ಸೇವಾ ಕೇಂದ್ರಗಳಲ್ಲಿ (ಬೆಂಗಳೂರು ಒನ್‌) ಅರ್ಜಿ ಸಲ್ಲಿಸಬಹುದು. ಪಾನ್‌ ಸಂಖ್ಯೆ ಇಲ್ಲದವರು ಕ್ಲೈಮ್‌ ಮೊತ್ತ ಪಡೆಯುವಾಗ ಅದನ್ನು ನೀಡಬೇಕು. ಅರ್ಜಿ ಆಹ್ವಾನಿಸಿರುವ ಬಗ್ಗೆ 15 ದಿನಗಳ ಮೊದಲೇ ಪ್ರಚಾರ ನೀಡಲಾಗುವುದು. ಸಂತ್ರಸ್ತರಿಗೆ ಕರೆ ಮಾಡಿ ಕೂಡಾ ಮಾಹಿತಿ ನೀಡಲಾಗುವುದು ಎಂದು ಮೂಲಗಳು ಹೇಳಿವೆ.

***

ಕಂಪನಿಯ ಆಸ್ತಿ ಹರಾಜು ಮಾಡಿ ಬಂದ ಹಣವನ್ನು ಹಂಚಿಕೆ ಮಾಡಲು ಆ್ಯಪ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಶೀಘ್ರ ಕ್ಲೈಮ್‌ ಅರ್ಜಿ ಆಹ್ವಾನಿಸಲಾಗುವುದು

-ಹರ್ಷ ಗುಪ್ತ‌, ಮುಖ್ಯಸ್ಥ ಐಎಂಎ ಸಕ್ಷಮ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.