ನವದೆಹಲಿ: ಸಂಸದೀಯ ಆಯ್ಕೆ ಸಮಿತಿಯು ಯಾವುದೇ ಮಹತ್ವದ ಬದಲಾವಣೆಗಳನ್ನು ಮಾಡದೆಯೇ ಪ್ರಸ್ತಾವಿತ ಅದಾಯ ತೆರಿಗೆ ಮಸೂದೆ, 2025 ಅನ್ನು ಬುಧವಾರ ಅನುಮೋದಿಸಿದೆ ಎಂದು ತಿಳಿದು ಬಂದಿದೆ.
ವಿವಿಧ ಕಾರಣಗಳಿಗಾಗಿ ಶೋಧ ಅಥವಾ ಜಪ್ತಿ ಕ್ರಮ ಎದುರಿಸುತ್ತಿರುವ ತೆರಿಗೆದಾರರ, ವಾಟ್ಸ್‌ಆ್ಯಪ್ ಸೇರಿ ವಿವಿಧ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲಿಸಲು ಅನುಮತಿ ನೀಡುವ ಅವಕಾಶವನ್ನು ಈ ಮಸೂದೆ ಒಳಗೊಂಡಿದೆ. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಆದರೆ, ಮಸೂದೆಯಲ್ಲಿನ ಈ ಅವಕಾಶದಲ್ಲಿ ಕೂಡ ಸಮಿತಿಯು ಬದಲಾವಣೆ ಮಾಡಿಲ್ಲ ಎನ್ನಲಾಗಿದೆ.
ಮಸೂದೆಯನ್ನು ಫೆಬ್ರುವರಿ 13ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಈಗ, ಮಸೂದೆ ಕುರಿತ ವರದಿಗೆ ಬಿಜೆಪಿ ಸಂಸದ ಬೈಜಯಂತ ಪಾಂಡಾ ನೇತೃತ್ವದ ಸಂಸದೀಯ ಆಯ್ಕೆ ಸಮಿತಿಯು ಸರ್ವಾನುಮತದ ಒಪ್ಪಿಗೆ ನೀಡಿದೆ ಎಂದು ಮೂಲಗಳು ಹೇಳಿವೆ.
ಇದೇ 21ರಿಂದ ಆರಂಭವಾಗಲಿರುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆ ಮಂಡನೆಗೆ ದಾರಿ ಸುಗಮವಾದಂತಾಗಿದೆ. ಸಮಿತಿಯು ಅಧಿವೇಶನದ ಮೊದಲ ದಿನವೇ ಮಸೂದೆ ಮಂಡಿಸುವ ಸಾಧ್ಯತೆ ಇದ್ದು, ಸರ್ಕಾರ ಕೂಡ ಇದನ್ನು ಅಂಗೀಕರಿಸುವ ನಿರೀಕ್ಷೆ ಇದೆ.
ನೂತನ ಆದಾಯ ತೆರಿಗೆ ಕಾಯ್ದೆಯನ್ನು ಮುಂದಿನ ವರ್ಷ ಏಪ್ರಿಲ್ 1ರಿಂದ ಜಾರಿಗೊಳಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಸದ್ಯ ಜಾರಿಯಲ್ಲಿರುವ ಆದಾಯ ತೆರಿಗೆ ಕಾಯ್ದೆ–1961, ಈ ವರೆಗೆ 65 ಬಾರಿ ತಿದ್ದುಪಡಿಗೆ ಒಳಗಾಗಿದೆ. ಕಾಯ್ದೆಯ ಅವಕಾಶಗಳಿಗೆ ಅಂದಾಜು 4 ಸಾವಿರದಷ್ಟು ತಿದ್ದುಪಡಿಗಳನ್ನು ತರಲಾಗಿದೆ.
‘ಸಮಿತಿಯು 285 ಸಲಹೆಗಳನ್ನು ನೀಡಿದೆ. ಒಟ್ಟಾರೆ ಕಾಯ್ದೆಯ ರಚನೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅವಕಾಶಗಳಲ್ಲಿನ ಬದಲಾವಣೆಗಳು ತಾಂತ್ರಿಕ ಸ್ವರೂಪದವುಗಳು. ಹಣಕಾಸು ಸಚಿವಾಲಯ ಕೂಡ ಸಮಿತಿ ನೀಡಿರುವ ಬಹುತೇಕ ಎಲ್ಲ ಸಲಹೆಗಳನ್ನು ಒಪ್ಪಿಕೊಂಡಿದೆ’ ಎಂದು ಸಮಿತಿ ಸದಸ್ಯರಾಗಿರುವ ಸಂಸದರೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.