ADVERTISEMENT

ಸ್ವಾತಂತ್ರ್ಯೋತ್ಸವ: ಪ್ರಧಾನಿ ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಆಗಸ್ಟ್ 2020, 4:03 IST
Last Updated 15 ಆಗಸ್ಟ್ 2020, 4:03 IST
ದೆಹಲಿಯ ಕೆಂಪುಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು – ಎಎಫ್‌ಪಿ ಚಿತ್ರ
ದೆಹಲಿಯ ಕೆಂಪುಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು – ಎಎಫ್‌ಪಿ ಚಿತ್ರ   

ದೇಶದ 74ನೇ ಸ್ವಾತಂತ್ರೋತ್ಸವ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ಆತ್ಮ ನಿರ್ಭರ ಭಾರತ’, ರಕ್ಷಣೆ, ಕೃಷಿ ಕ್ಷೇತ್ರಗಳಲ್ಲಿ ಸ್ವಾವಲಂಬನೆ, ಮಹಿಳಾ ಸಬಲೀಕರಣ, ಅಂತರರಾಷ್ಟ್ರೀಯ ಬಾಂಧವ್ಯ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಮೋದಿ ಅವರು ಸ್ವಾತಂತ್ರ್ಯೋತ್ಸವ ದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿರುವುದು ಇದು 7ನೇ ಬಾರಿ. ಭಾಷಣದ ಮುಖ್ಯಾಂಶಗಳು ಇಲ್ಲಿವೆ.

* ದೇಶದ ಉಜ್ವಲ ಭವಿಷ್ಯಕ್ಕೆ ಕೊರೊನಾ ಅಡ್ಡಿಯಾಗಿದೆ. ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಕೊರೊನಾ ಯೋಧರ ಕಾರ್ಯ ಶ್ಲಾಘನೀಯ

* ನಾವು ಸಂಕಷ್ಟದ ಸಮಯಗಳನ್ನು ಎದುರಿಸುತ್ತಿದ್ದೇವೆ. ನಾನು ಇಂದು (ಕೆಂಪು ಕೋಟೆಯಲ್ಲಿ) ಚಿಕ್ಕ ಮಕ್ಕಳನ್ನು ನನ್ನ ಮುಂದೆ ನೋಡಲು ಸಾಧ್ಯವಾಗುತ್ತಿಲ್ಲ. ಕೊರೊನಾ ಎಲ್ಲರಿಗೂ ತಡೆಯೊಡ್ಡಿದೆ

ADVERTISEMENT

* ಈ ಕೋವಿಡ್ ಕಾಲದಲ್ಲಿ, ಕೊರೊನಾ ಯೋಧರು ‘ಸೇವಾ ಪಾರ್ಮೋ ಧರ್ಮಃ’ ಮಂತ್ರವನ್ನು ಗಮನದಲ್ಲಿಟ್ಟುಕೊಂಡು ಭಾರತದ ಜನರಿಗೆ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಕೃತಜ್ಞತೆಗಳು

* ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನೆನಪಿಸುವ ದಿನ ಇದು. ನಮ್ಮ ಭದ್ರತೆಯನ್ನು ಖಾತರಿಪಡಿಸುವ ಸೇನೆ, ಅರೆಸೈನಿಕ ಮತ್ತು ಪೊಲೀಸರು ಸೇರಿದಂತೆ ಭದ್ರತಾ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವ ದಿನ ಇದು

* ಭಾರತ ಯುವ ಶಕ್ತಿಯಿಂದ ತುಂಬಿದ ದೇಶ, ‘ಆತ್ಮ ನಿರ್ಭರ’ಕ್ಕೆ ಆತ್ಮವಿಶ್ವಾಸ ಹೊಂದಿರುವ ದೇಶ ಭಾರತ

* ದೇಶದ ಮಹಿಳೆಯರು, ಮಕ್ಕಳ ಮೇಲೆ ನನಗೆ ಪೂರ್ಣ ನಂಬಿಕೆಯಿದೆ. ನಾವು ‘ಆತ್ಮ ನಿರ್ಭರ ಭಾರತ’ ಸಾಧಿಸಬಲ್ಲೆವು

* ದೇಶದ 130 ಕೋಟಿ ಜನರ ಮಂತ್ರವಾಗಿದೆ ‘ಆತ್ಮ ನಿರ್ಭರ ಭಾರತ’

* ಕೃಷಿ ಕ್ಷೇತ್ರದಲ್ಲಿ ನಾವು ‘ಆತ್ಮ ನಿರ್ಭರ’ರಾಗುತ್ತಿದ್ದೇವೆ. ಕೃಷಿ ಕ್ಷೇತ್ರಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಸರಳಗೊಳಿಸಲಾಗಿದೆ

* ‘ಆತ್ಮ ನಿರ್ಭರ ಭಾರತ’ ಕನಸನ್ನು ಭಾರತ ಸಾಕಾರಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ. ಭಾರತೀಯರ ಸಾಮರ್ಥ್ಯ ಸಾಮರ್ಥ್ಯದ ಬಗ್ಗೆ ನನಗೆ ವಿಶ್ವಾಸವಿದೆ

* ಒಮ್ಮೆ ನಾವು ಏನನ್ನಾದರೂ ಮಾಡಲು ನಿರ್ಧರಿಸಿದರೆ, ನಾವು ಆ ಗುರಿಯನ್ನು ಸಾಧಿಸುವವರೆಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ

* ‘ಆತ್ಮ ನಿರ್ಭರ ಭಾರತ’ ಸಾಧಿಸಲ್ಲಿ ಲಕ್ಷಾಂತರ ಸವಾಲುಗಳಿವೆ ಎಂಬುದನ್ನು ಬಲ್ಲೆ. ಆದರೆ, ಈ ಸವಾಲುಗಳಿಗೆ ದೇಶದಲ್ಲಿ ಕೋಟ್ಯಂತರ ಪರಿಹಾರಗಳೂ ಇವೆ. ನನ್ನ ದೇಶವಾಸಿಗಳು ಸವಾಲು ಮೆಟ್ಟಿ ನಿಲ್ಲುವ ಪರಿಹಾರ ನೀಡುತ್ತಾರೆ

* ಸ್ವತಂತ್ರ ಭಾರತದ ಮನಸ್ಥಿತಿ ‘ವೋಕಲ್ ಫಾರ್ ಲೋಕಲ್ (ಸ್ಥಳೀಯ ಉತ್ಪನ್ನಗಳಿಗೆ ನಾವು ದನಿಯಾಗಬೇಕು)’ ಆಗಿರಬೇಕು. ಸ್ಥಳೀಯ ಉತ್ಪನ್ನಗಳನ್ನು ನಾವು ಇಷ್ಟಪಡಬೇಕು. ನಾವಿದನ್ನು ಮಾಡದಿದ್ದರೆ ಸ್ಥಳೀಯವಾಗಿ ಉತ್ತಮ ಉತ್ಪನ್ನಗಳ ತಯಾರಿಗೆ ಅವಕಾಶ ದೊರೆಯುವುದಿಲ್ಲ, ಪ್ರೋತ್ಸಾಹ ದೊರೆಯುವುದಿಲ್ಲ

* ಕಳೆದ ವರ್ಷ ವಿದೇಶಿ ನೇರ ಹೂಡಿಕೆಯಲ್ಲಿ ಶೇ 18ರ ದಾಖಲೆಯ ಹೆಚ್ಚಳವಾಗಿತ್ತು. ಜಗತ್ತು ಭಾರತದ ಮೇಲೆ ವಿಶ್ವಾಸವಿರಿಸಿದೆ. ನಮ್ಮ ಪ್ರಜಾಪ್ರಭುತ್ವ, ಆರ್ಥಿಕತೆಯ ತಳಹದಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸಿದ್ದೇವೆ

* ‘ಆತ್ಮ ನಿರ್ಭರ ಭಾರತ’ ಸಾಧಿಸಲು ಕೃಷಿ ಕ್ಷೇತ್ರ, ಕೃಷಿಕರು ‘ಆತ್ಮ ನಿರ್ಭರ’ರಾಗಬೇಕಿದೆ. ಕೃಷಿಕರಿಗೆ ಹೆಚ್ಚು ಮೂಲಸೌಕರ್ಯ ಕಲ್ಪಿಸಲು ₹1 ಲಕ್ಷ ಕೋಟಿ ‘ಕೃಷಿ ಮೂಲಸೌಕರ್ಯ ನಿಧಿ’ ಸ್ಥಾಪಿಸಲಾಗಿದೆ: ಮೋದಿ

* 2014ಕ್ಕೂ ಮೊದಲು ಕೇವಲ 5 ಡಜನ್ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕವಿತ್ತು. ಕಳೆದ 5 ವರ್ಷಗಳಲ್ಲಿ 1.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಒದಗಿಸಲಾಗಿದೆ. ಮುಂದಿನ ಸಾವಿರ ದಿನಗಳಲ್ಲಿ ಎಲ್ಲ ಹಳ್ಳಿಗಳಿಗೆ ದೊರೆಯಲಿದೆ

* ‘ಆತ್ಮ ನಿರ್ಭರ ಭಾರತ’ ಸಾಧಿಸಲು ಶಿಕ್ಷಣ ಬಹು ಮುಖ್ಯವಾದದ್ದು. ಅದಕ್ಕಾಗಿ ಹೊಸ ಶಿಕ್ಷಣ ನೀತಿ ರೂಪಿಸಿದ್ದೇವೆ

* ಮಹಿಳೆಯರು ಅವಕಾಶ ಸಿಕ್ಕಾಗಲೆಲ್ಲ ಭಾರತವನ್ನು ಗಟ್ಟಿಗೊಳಿಸಿದ್ದಾರೆ. ಹೆಮ್ಮೆಗೊಳ್ಳುವಂತೆ ಮಾಡಿದ್ದಾರೆ

* ಸ್ತ್ರೀಯರ ವಿವಾಹದ ಕನಿಷ್ಠ ವಯೋಮಿತಿಯ ಪುನರ್ ಪರಿಶೀಲನೆಗೆ ಸಮಿತಿ ರಚಿಸಿದ್ದೇವೆ. ಸಮಿತಿ ವರದಿ ಸಲ್ಲಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ

* ಕೊರೊನಾಗೆ ಲಸಿಕೆ ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ದೇಶದಲ್ಲಿ ಮೂರು ಲಸಿಕೆಗಳು ಪ್ರಾಯೋಗಿಕ ಹಂತದಲ್ಲಿವೆ. ವಿಜ್ಞಾನಿಗಳು ಸಮ್ಮತಿ ಸೂಚಿಸಿದ ಬೆನ್ನಲ್ಲೇ ಅಪಾರ ಪ್ರಮಾಣದ ಉತ್ಪಾದನೆ ಆರಂಭವಾಗಲಿದೆ

* ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಯುಗ ಶುರುವಾಗಿದೆ

* ನಮ್ಮೊಂದಿಗೆ ಗಡಿ ಹಂಚಿಕೊಂಡಿರುವವರು ಮಾತ್ರ ನೆರೆಯವರಲ್ಲ. ಸಹೃದಯಿ ಬಾಂಧವ್ಯ ಹೊಂದಿಕೊಂಡಿರುವವರೂ ನೆರೆಯವರೇ. ಕಳೆದ ಕೆಲವು ಸಮಯಗಳಿಂದ ಭಾರತವು ಎಲ್ಲ ದೇಶಗಳೊಂದಿಗೆ ಬಾಂಧವ್ಯ ಹೆಚ್ಚಿಸಿಕೊಂಡಿದೆ

* ಭಯೋತ್ಪಾದನೆ, ಭೂಪ್ರದೇಶ ವಿಸ್ತರಣಾ ವಾದವನ್ನು ಭಾರತ ಸೋಲಿಸುತ್ತಿದೆ. ಎಲ್‌ಒಸಿಯಿಂದ ಎಲ್‌ಎಸಿ ವರೆಗೆ ನಮ್ಮ ದೇಶದ ಸಾರ್ವಭೌಮತ್ವದ ಮೇಲೆ ಕಣ್ಣಿಟ್ಟವರಿಗೆ ನಮ್ಮ ಯೋಧರು ಅವರದ್ದೇ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.