ನವದೆಹಲಿ: ದೇಶದಾದ್ಯಂತ ಇಂದು 79ನೇ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯ ಕಾರ್ಯಕ್ರಮಕ್ಕಾಗಿ ಬಿಗಿ ಭದ್ರತೆ ಮಾಡಲಾಗಿದೆ.
ಬಹುಮಹಡಿ ಕಟ್ಟಡದ ಮೇಲೆ ಭದ್ರತಾ ಕ್ಯಾಮೆರಾಗಳು, 14,000 ಭದ್ರತಾ ಸಿಬ್ಬಂದಿ ಮತ್ತು ಟ್ರಾಫಿಕ್ ಪೊಲೀಸರನ್ನು ನಗರದಾದ್ಯಂತ ನಿಯೋಜಿಸಲಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸತತ 12ನೇ ಬಾರಿಗೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವ ಕೆಂಪು ಕೋಟೆಗೆ ಹಲವು ಪದರಗಳ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಕೆಂಪು ಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಕಣ್ಗಾವಲು ಇಡಲು ಸಿಸಿಟಿವಿ ಕ್ಯಾಮೆರಾಗಳು, ಡ್ರೋನ್ ಪತ್ತೆ ವ್ಯವಸ್ಥೆಗಳು, ಮುಖ ಗುರುತಿಸುವಿಕೆ ಕ್ಯಾಮೆರಾಗಳು ಮತ್ತು ಎಎನ್‌ಪಿಆರ್ (ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ) ಕ್ಯಾಮೆರಾಗಳ ಮೂಲಕ ಕಣ್ಗಾವಲು ಇಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾಹನಗಳ ಅಡಿಯಲ್ಲಿ ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಅಥವಾ ನಿಷಿದ್ಧ ವಸ್ತುಗಳ ಇರುವಿಕೆ ಸ್ಕ್ಯಾನ್ ಮಾಡಲು ಕೆಂಪು ಕೋಟೆಯ ಐದು ಪಾರ್ಕಿಂಗ್ ಪ್ರದೇಶಗಳಲ್ಲಿ ಇದೇ ಮೊದಲ ಬಾರಿಗೆ ವಾಹನಗಳ ಕೆಳಭಾಗದ ಕಣ್ಗಾವಲು ವ್ಯವಸ್ಥೆಗಳನ್ನು (ಯುವಿಎಸ್ಎಸ್) ನಿಯೋಜಿಸಲಾಗಿದೆ ಎಂದೂ ತಿಳಿಸಿದ್ದಾರೆ.
ಯಾವುದೇ ಬೆದರಿಕೆಗಳನ್ನು ಪತ್ತೆಹಚ್ಚಲು ಅತ್ಯಾಧುನಿಕ ಕ್ಯಾಮೆರಾಗಳು ಮತ್ತು ಸ್ಕ್ಯಾನರ್‌ಗಳನ್ನು ಬಳಸಲಾಗುತ್ತಿದೆ. ಚೆಕ್‌ಪೋಸ್ಟ್‌ಗಳು ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆಯನ್ನು ಬಲಪಡಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.