ADVERTISEMENT

‘ಇಂಡಿಯಾ’ ಬಣದಿಂದ ಉಪರಾಷ್ಟ್ರಪತಿ ಅಭ್ಯರ್ಥಿ ಘೋಷಣೆ ಇಂದು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 20:27 IST
Last Updated 18 ಆಗಸ್ಟ್ 2025, 20:27 IST
ಜೈರಾಮ್‌ ರಮೇಶ್
ಜೈರಾಮ್‌ ರಮೇಶ್   

ನವದೆಹಲಿ: ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ತನ್ನ ಉಪರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯನ್ನು ಮಂಗಳವಾರ ಮಧ್ಯಾಹ್ನ ಘೋಷಿಸುವ ಸಾಧ್ಯತೆಯಿದೆ. ಚಂದ್ರಯಾನ–1 ಯೋಜನೆ ಮುನ್ನಡೆಸಿದ್ದ ಇಸ್ರೊದ ಮಾಜಿ ವಿಜ್ಞಾನಿ ಮೈಲಸ್ವಾಮಿ ಅಣ್ಣಾದೊರೈ ಸೇರಿದಂತೆ ಹಲವು ಹೆಸರುಗಳ ಬಗ್ಗೆ ಚರ್ಚೆ ನಡೆದಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮಧ್ಯಾಹ್ನ 12.30ಕ್ಕೆ ವಿರೋಧ ಪಕ್ಷಗಳ ನಾಯಕರ ಸಭೆ ಕರೆಯಲಾಗಿದ್ದು, ಆ ಬಳಿಕ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್ ಅವರು ಸಭೆಯ ಕುರಿತು ಮಾಡಿರುವ ಟ್ವೀಟ್‌ನಲ್ಲಿ ‘ಇಂಡಿಯಾ’ ಮೈತ್ರಿಕೂಟ ಎಂಬುದರ ಬದಲು ‘ವಿರೋಧ ಪಕ್ಷಗಳು’ ಎಂದು ಉಲ್ಲೇಖಿಸಿದ್ದಾರೆ. ಎಎಪಿಯಂತಹ ಪಕ್ಷಗಳೂ ಸಭೆಯಲ್ಲಿ ಪಾಲ್ಗೊಳ್ಳಲಿ ಎಂಬುದು ಇದರ ಹಿಂದಿನ ಉದ್ದೇಶ ಎಂದು ವಿಶ್ಲೇಷಿಸಲಾಗಿದೆ.

ADVERTISEMENT

ಖರ್ಗೆ ನಿವಾಸದಲ್ಲಿ ಸೋಮವಾರ ‘ಇಂಡಿಯಾ’ ಮೈತ್ರಿಕೂಟದ ನಾಯಕರ ಸಭೆ ನಡೆದಿದ್ದು, ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ. 

‘ಅಣ್ಣಾದೊರೈ ಸೇರಿದಂತೆ ಕೆಲವು ಹೆಸರುಗಳು ಸಭೆಯಲ್ಲಿ ಚರ್ಚೆಗೆ ಬಂದವು. ಖರ್ಗೆ ಅವರು ವಿರೋಧ ಪಕ್ಷಗಳ ಎಲ್ಲ ನಾಯಕರ ಜತೆ ಮಾತನಾಡಿದ ಬಳಿಕ ಒಮ್ಮತದಿಂದ ಅಭ್ಯರ್ಥಿಯ ಆಯ್ಕೆ ನಡೆಯಲಿದೆ’ ಎಂದು ಮೂಲಗಳು ಹೇಳಿವೆ.

ತಮಿಳುನಾಡಿನ ಬಿಜೆಪಿ ನಾಯಕ ಸಿ.ಪಿ. ರಾಧಾಕೃಷ್ಣನ್ ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಭಾನುವಾರ ಆಯ್ಕೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.