ADVERTISEMENT

ಭೂಮಿ ಶೋಷಣೆಯಲ್ಲಿ ಭಾರತ ಯಾವುದೇ ಪಾತ್ರ ಹೊಂದಿಲ್ಲ: ಮೋದಿ

​ಪ್ರಜಾವಾಣಿ ವಾರ್ತೆ
Published 3 ಮೇ 2022, 18:55 IST
Last Updated 3 ಮೇ 2022, 18:55 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಕೊಪನ್‌ಹೆಗನ್‌: ‘ಭೂಮಿಯ ಶೋಷಣೆಯಲ್ಲಿ ಭಾರತ ಯಾವುದೇ ಪಾತ್ರವನ್ನು ಹೊಂದಿಲ್ಲ. ಬದಲಾಗಿ, ಜನರ ಬೆಂಬಲದೊಂದಿಗೆ ಭೂಮಿಯನ್ನು ಉಳಿಸುವ ಪ್ರಯತ್ನದಲ್ಲಿ ಭಾರತ ಮುಂಚೂಣಿಯಲ್ಲಿ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದರು.

ಭಾರತೀಯರೊಂದಿಗೆ ಇಲ್ಲಿ ಸಂವಾದದಲ್ಲಿ ಮಾತನಾಡಿದ ಅವರು, ನವೀಕರಿಸಬಲ್ಲ ಇಂಧನ ಬಳಕೆಯನ್ನು ಉತ್ತೇಜಿಸಲು ಸರ್ಕಾರ ಕೈಗೊಂಡ ಕ್ರಮಗಳು ಹಾಗೂ ಗ್ಲಾಸ್ಗೋ ಹವಾಮಾನ ವೈಪರೀತ್ಯ ತಡೆ ಶೃಂಗ ಸಭೆಯಲ್ಲಿ ಭಾರತ ತೆಗೆದುಕೊಂಡ ಬದ್ಧತೆಗಳ ಬಗ್ಗೆಯೂ ಉಲ್ಲೇಖಿಸಿದರು.

‘ಭಾರತ ತನ್ನ ಹವಾಮಾನ ಕ್ರಮಗಳನ್ನು ಪೂರೈಸಲು ಸಮರ್ಥವಾಗಿದೆ. ಏಕೆಂದರೆ,ಭಾರತವು ಇತರರಂತೆ ಭೂಮಿಯನ್ನು ಉಳಿಸುವ ಜವಾಬ್ದಾರಿಯನ್ನು ಕೇವಲ ಬಹುಪಕ್ಷೀಯ ಸಂಸ್ಥೆಗಳ ಮೇಲೆ ಹೊರಿಸಿಲ್ಲ. ಜಗತ್ತಿನ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂಬುದಾಗಿ ಪರಿಗಣಿಸಿದೆ’ ಎಂದು ಅವರು ಹೇಳಿದರು.

ADVERTISEMENT

ಈ ಸಂವಾದ ಕಾರ್ಯಕ್ರಮದಲ್ಲಿ ಡೆನ್ಮಾರ್ಕ್‌ ಪ್ರಧಾನಿ ಮೆಟ್ಟೆ ಫ್ರೆಡೆರಿಕ್‌ಸೆನ್‌ ಅವರೂ ಭಾಗವಹಿಸಿದ್ದರು. ಈ ವೇಳೆ ಮೋದಿ ಡೆನ್ಮಾರ್ಕ್‌ ಪ್ರಧಾನಿಯನ್ನು ‘ಸ್ನೇಹಿತೆ’ ಎಂದು ಜನರಿಗೆ ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಡೆನ್ಮಾರ್ಕ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು, ಸಂಶೋಧಕರು, ವೃತ್ತಿಪರರು, ಉದ್ಯೋಗಿಗಳು ಸೇರಿದಂತೆ 1000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.