ADVERTISEMENT

ದೇಸಿ ಹಡಗು ನಿರ್ಮಾಣ ಕೇಂದ್ರವಾಗಲು ಭಾರತಕ್ಕೆ ವಿಪುಲ ಅವಕಾಶ: ರಾಜನಾಥ್‌ ಸಿಂಗ್‌

ಭಾರತೀಯ ಕರಾವಳಿ ಕಾರ್ಯಪಡೆಯ ಹಡಗು ‘ವಿಗ್ರಹ‘ ಲೋಕಾರ್ಪಣೆ

ಪಿಟಿಐ
Published 28 ಆಗಸ್ಟ್ 2021, 8:58 IST
Last Updated 28 ಆಗಸ್ಟ್ 2021, 8:58 IST
ಚೆನ್ನೈನಲ್ಲಿ ಶನಿವಾರ ನಡೆದ ಭಾರತೀಯ ಕರಾವಳಿ ಪಡೆಯ ಹಡಗು ‘ವಿಗ್ರಹ‘ ಲೋಕಾರ್ಪಣೆ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಮಾತನಾಡಿದರು.
ಚೆನ್ನೈನಲ್ಲಿ ಶನಿವಾರ ನಡೆದ ಭಾರತೀಯ ಕರಾವಳಿ ಪಡೆಯ ಹಡಗು ‘ವಿಗ್ರಹ‘ ಲೋಕಾರ್ಪಣೆ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಮಾತನಾಡಿದರು.   

ಚೆನ್ನೈ: ಕೇಂದ್ರ ಸರ್ಕಾರ ದೇಶೀಯ ಉದ್ಯಮವನ್ನು ವಿಶ್ವದರ್ಜೆಗೆ ಕೊಂಡೊಯ್ಯಲು ನೆರವಾಗುವಂತಹ ನೀತಿ ರೂಪಿಸಿದ್ದು, ಇದನ್ನು ಬಳಸಿಕೊಳ್ಳುವ ಮೂಲಕ ಭಾರತವನ್ನು ದೇಶೀಯ ಹಡಗು ನಿರ್ಮಾಣ ಕೇಂದ್ರವಾಗಿ ಬೆಳೆಸಲು ವಿಪುಲ ಅವಕಾಶಗಳಿವೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶನಿವಾರ ಹೇಳಿದರು.

ಭಾರತೀಯ ಕರಾವಳಿ ಕಾರ್ಯಪಡೆಯ ‘ವಿಗ್ರಹ’ ಹಡಗಿನ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮುಂದಿನ ಎರಡು ವರ್ಷಗಳಲ್ಲಿ ವಿಶ್ವದಾದ್ಯಂತ ಭದ್ರತೆಗಾಗಿ ಖರ್ಚು ಮಾಡುವ ಹಣ 2.1 ಟ್ರಿಲಿಯನ್ ಡಾಲರ್‌ಗೆ ತಲುಪಲಿದೆ. ಈ ವೆಚ್ಚ, ಹೆಚ್ಚಿನ ರಾಷ್ಟ್ರಗಳ ಒಂದು ವರ್ಷದ ಬಜೆಟ್‌ಗಿಂತ ಹೆಚ್ಚಿದೆ. ಹಾಗೆಯೇ, ಮುಂದಿನ ಐದು ವರ್ಷಗಳಲ್ಲಿ ಈ ವೆಚ್ಚ ಹಲವು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇಂತಹ ಪರಿಸ್ಥಿತಿಯಲ್ಲಿ, ನಮ್ಮ ಸಾಮರ್ಥ್ಯವನ್ನು ನಾವು ಸಂಪೂರ್ಣವಾಗಿ ಬಳಸಿಕೊಳ್ಳಲು ಉತ್ತಮ ಅವಕಾಶವಿದೆ. ಸರ್ಕಾರ ರೂಪಿಸಿರುವ ನೀತಿ, ನಿರೂಪಣೆಯ ಲಾಭವನ್ನು ಪಡೆದುಕೊಂಡು, ದೇಶವನ್ನು ‌ಹಡಗು ನಿರ್ಮಾಣದ ಕೇಂದ್ರವನ್ನಾಗಿಸುವತ್ತ ಹೆಜ್ಜೆ ಹಾಕಬೇಕು‘ ಎಂದು ಹೇಳಿದರು.

ADVERTISEMENT

‘ದೇಶದಲ್ಲಿರುವ ಇಂಥ ಸಾಧ್ಯತೆಗಳನ್ನು ಪರಿಗಣಿಸಿಯೇ ಕೇಂದ್ರ ಸರ್ಕಾರ ದೇಶೀಯ ಉದ್ಯಮದ ಅಭಿವೃದ್ಧಿಗೆ ಸಹಾಯ ವಾಗುವಂತಹ ನೀತಿಗಳನ್ನು ರೂಪಿಸಿದೆ.‌ ಈ ನೀತಿಗಳು ಸಾರ್ವಜನಿಕ ಅಥವಾ ಖಾಸಗಿ ವಲಯದ ಸಂಸ್ಥೆಗಳಿಗೆ ವಿಶ್ವ ದರ್ಜೆಯ ಉದ್ಯಮಿಗಳಾಗಲು ಸಹಾಯವಾಗುತ್ತವೆ‘ ಎಂದು ಸಿಂಗ್ ಹೇಳಿದರು.

ಐಸಿಜಿಎಸ್ ‘ವಿಗ್ರಹ‘ದ ಹಡಗಿನ ವಿನ್ಯಾಸದ ಪರಿಕಲ್ಪನೆಯಿಂದ ಹಿಡಿದು ಹಡಗಿನ ಪೂರ್ಣ ಅಭಿವೃದ್ಧಿಯವರೆಗೆ ದೇಶೀಯವಾಗಿ ನಿರ್ಮಾಣವಾಗಿದೆ ಎಂದು ಸಿಂಗ್ ತಿಳಿಸಿದರು.

ಭಾರತೀಯ ರಕ್ಷಣಾ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ, ಖಾಸಗಿ ಕಂಪನಿ ಲಾರ್ಸನ್ ಮತ್ತು ಟರ್ಬೊ ಲಿಮಿಟೆಡ್ (ಎಲ್‌ ಅಂಡ್ ಟಿ) ಸಹಭಾಗಿತ್ವದೊಂದಿಗೆ ಒಂದಲ್ಲ, ಎರಡಲ್ಲ, ಏಳು ಹಡಗುಗಳನ್ನು ನಿರ್ಮಾಣ ಮಾಡಿ, ಅವುಗಳು ಕಾರ್ಯಾರಂಭ ಮಾಡಿವೆ‘ ಎಂದು ಹೇಳಿದರು.

2015ರಲ್ಲಿ ಎಲ್‌ ಅಂಡ್‌ ಟಿ ನಡುವೆ ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಏಳು ವರ್ಷಗಳಲ್ಲಿ, ಇಷ್ಟೆಲ್ಲ ಹಡಗು ನಿರ್ಮಾಣ ಕಾರ್ಯಗಳು ನಡೆದಿವೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.