ಮ್ಯಾನ್ಮಾರ್‌ಗೆ 50 ಟನ್ ಪರಿಹಾರ ಸಾಮಗ್ರಿ ಕಳುಹಿಸಿದ ಭಾರತ
(ಚಿತ್ರ–@DrSJaishankar)
ನವದೆಹಲಿ: ಭೂಕಂಪ ಪೀಡಿತ ಮ್ಯಾನ್ಮಾರ್‌ಗೆ ಭಾರತ ಸುಮಾರು 50 ಟನ್ ಪರಿಹಾರ ಸಾಮಗ್ರಿಗಳನ್ನು ಸೋಮವಾರ ರವಾನಿಸಿದೆ.
ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತೀಯ ನೌಕಾಪಡೆಯ ಎರಡು ಹಡಗುಗಳಾದ ಐಎನ್‌ಎಸ್ ಸಾತ್ಪುರ ಮತ್ತು ಐಎನ್‌ಎಸ್ ಸಾವಿತ್ರಿ ಮ್ಯಾನ್ಮಾರ್‌ನ ಯಾಂಗೂನ್ ನಗರಕ್ಕೆ ತಲುಪಿವೆ.
ಭಾರತೀಯ ನೌಕಾಪಡೆಯ ಇನ್ನೂ ಮೂರು ಹಡಗುಗಳಾದ ಎಲ್‌ಸಿಯು-52, ಐಎನ್‌ಎಸ್ ಕಾರ್ಮುಖ್, ಐಎನ್‌ಎಸ್ ಘರಿಯಲ್ 500 ಟನ್‌ಗಳಿಗೂ ಹೆಚ್ಚು ಹೆಚ್ಚುವರಿ ಸಾಮಗ್ರಿಗಳೊಂದಿಗೆ ಯಾಂಗೊನ್‌ಗೆ ತೆರಳುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್, 'ಆಪರೇಷನ್ ಬ್ರಹ್ಮ' ಮಾನವೀಯ ಕಾರ್ಯಾಚರಣೆಯ ಭಾಗವಾಗಿ ಐಎನ್‌ಎಸ್ ಸಾತ್ಪುರ ಮತ್ತು ಐಎನ್‌ಎಸ್ ಸಾವಿತ್ರಿ ಇಂದು ಪರಿಹಾರ ಸಾಮಗ್ರಿಗಳೊಂದಿಗೆ ಯಾಂಗೂನ್ ತಲುಪಿವೆ ಎಂದು ಹೇಳಿದ್ದಾರೆ.
ಐಎನ್‌ಎಸ್ ಸಾತ್ಪುರ ಮತ್ತು ಐಎನ್‌ಎಸ್ ಸಾವಿತ್ರಿ ಹಡಗುಗಳಲ್ಲಿ ಬಂದ ಪರಿಹಾರ ಸಾಮಗ್ರಿಗಳನ್ನು, ಭಾರತೀಯ ರಾಯಭಾರಿ ಅಧಿಕಾರಿ ಅಭಯ್ ಠಾಕೂರ್ ಅವರು ಮ್ಯಾನ್ಯಾರ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಭೂಕಂಪದಲ್ಲಿ 2 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟು, ಸುಮಾರು 3,900ಕ್ಕೂ ಮಂದಿ ಗಾಯಗೊಂಡಿದ್ದಾರೆ.
ಮ್ಯಾನ್ಮಾರ್‌ನಲ್ಲಿ ನೆರವು ಕಾರ್ಯಾಚರಣೆಗೆ ಕೈಜೋಡಿಸಲು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ (ಎನ್‌ಡಿಆರ್‌ಎಫ್) 80 ಮಂದಿಯ ತುಕಡಿಯನ್ನು ಭಾರತವು ಕಳುಹಿಸಿತ್ತು. ‘ಆಪರೇಷನ್ ಬ್ರಹ್ಮ’ ಅಡಿಯಲ್ಲಿ ಈ ತುಕಡಿಯನ್ನು ರವಾನಿಸಲಾಗಿತ್ತು.
ಶನಿವಾರ 5 ಮಿಲಿಟರಿ ವಿಮಾನಗಳಲ್ಲಿ 15 ಟನ್ ಪರಿಹಾರ ಸಾಮಗ್ರಿಗಳು, ರಕ್ಷಣಾ ತಂಡಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ರವಾನಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.