ADVERTISEMENT

ಬ್ಲಿಂಕನ್‌ ಜತೆ ಅಫ್ಗಾನಿಸ್ತಾನ, ಚೀನಾ ವಿಷಯ ಚರ್ಚೆ

ಏಜೆನ್ಸೀಸ್
Published 28 ಜುಲೈ 2021, 7:11 IST
Last Updated 28 ಜುಲೈ 2021, 7:11 IST
ಆ್ಯಂಟನಿ ಬ್ಲಿಂಕನ್‌
ಆ್ಯಂಟನಿ ಬ್ಲಿಂಕನ್‌   

ನವದೆಹಲಿ: ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಪ್ರಾಬಲ್ಯ ಸಾಧಿಸುತ್ತಿರುವುದು ಮತ್ತು ಚೀನಾ ಧೋರಣೆಗಳ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಅವರ ಜತೆ ಭಾರತದ ಅಧಿಕಾರಿಗಳು ಚರ್ಚಿಸಲಿದ್ದಾರೆ.

ಮಂಗಳವಾರ ಅವರು ಭಾರತಕ್ಕೆ ಬಂದಿದ್ದು,ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಜತೆ ಸಮಾಲೋಚನೆ ನಡೆಸಲಿದ್ದಾರೆ.

ಅಫ್ಗಾನಿಸ್ತಾನದ ಹಲವು ಪ್ರದೇಶಗಳ ಮೇಲೆ ದಿನೇ ದಿನೇ ತಾಲಿಬಾನ್‌ ಸಂಘನೆ ತನ್ನ ಹಿಡಿತ ಸಾಧಿಸುತ್ತಿದೆ. ತಾಲಿಬಾನ್‌ಗೆ ಪಾಕಿಸ್ತಾನ ಬೆಂಬಲ ನೀಡುತ್ತಿದೆ. ಇದರಿಂದ, ಭಾರತದ ಮೇಲೆ ಉಗ್ರರು ದಾಳಿ ನಡೆಸಲು ಅಫ್ಗಾನಿಸ್ತಾನವು ನೆಲೆಯಾಗಲಿದೆ ಎನ್ನುವ ಆತಂಕವನ್ನು ಬ್ಲಿಂಕನ್‌ ಅವರ ಜತೆ ನಡೆಯುವ ಚರ್ಚೆ ಸಂದರ್ಭದಲ್ಲಿ ಪ್ರಸ್ತಾಪವಾಗುವ ನಿರೀಕ್ಷೆ ಇದೆ.

ADVERTISEMENT

ಚೀನಾದ ಆಕ್ರಮಣಕಾರಿ ನಿಲುವು ಸಹ ಮಾತುಕತೆ ಸಂದರ್ಭದಲ್ಲಿ ಪ್ರಸ್ತಾಪವಾಗಲಿದೆ. ಚೀನಾ ವಿರುದ್ಧದ ನಿಲುವುಗಳಿಗೆ ಬೆಂಬಲ ನೀಡಬೇಕು ಎಂದು ಭಾರತ ಬ್ಲಿಂಕನ್‌ ಅವರನ್ನು ಕೋರುವ ಸಾಧ್ಯತೆ ಇದೆ.

ಆದರೆ, ಅಮೆರಿಕ ಜತೆ ಭಾರತದ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ವೃದ್ಧಿಯಾಗಿದ್ದರೂ ಜೋ ಬೈಡನ್‌ ಅಧಿಕಾರಕ್ಕೆ ಬಂದ ನಂತರ ಚೀನಾ ಧೋರಣೆಗಳನ್ನು ಟೀಕಿಸಿಲ್ಲ ಎಂದು ಭಾರತದ ನೀತಿ ಸಂಶೋಧನಾ ಕೇಂದ್ರದ ವಿದೇಶಾಂಗ ವ್ಯವಹಾರಗಳ ತಜ್ಞ ಬ್ರಹ್ಮ ಚೆಲ್ಲಾನಿ ವಿಶ್ಲೇಷಿಸಿದ್ದಾರೆ.

‘ಚೀನಾ ಜತೆ ಭಾರತ ಸೇನಾ ಸಂಘರ್ಷಕ್ಕೆ ಇಳಿದಿತ್ತು. ಆಗ, ಟ್ರಂಪ್‌ ಆಡಳಿತ ಚೀನಾ ಧೋರಣೆಗಳನ್ನು ಬಹಿರಂಗವಾಗಿ ಟೀಕಿಸಿ ಭಾರತಕ್ಕೆ ಬೆಂಬಲ ನೀಡಿತ್ತು. ಆದರೆ, ಬೈಡನ್‌ ಆಡಳಿತದಲ್ಲಿನ ಯಾವುದೇ ಸಚಿವರು ಅಥವಾ ಉನ್ನತ ಮಟ್ಟದ ಅಧಿಕಾರಿಗಳು ಇದುವರೆಗೆ ಬಹಿರಂಗವಾಗಿ ಭಾರತಕ್ಕೆ ಬೆಂಬಲ ಘೋಷಿಸಿಲ್ಲ’ ಎಂದು ಚೆಲ್ಲಾನಿ ವಿವರಿಸಿದ್ದಾರೆ.

ಬ್ಲಿಂಕನ್‌ ಅವರು, ಪ್ರಧಾನಿ ಮತ್ತು ವಿದೇಶಾಂಗ ಸಚಿವರ ಭೇಟಿಯ ಸಂದರ್ಭದಲ್ಲಿ ಮಾನವ ಹಕ್ಕುಗಳ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ವಿಶ್ವದ ಎರಡು ಬೃಹತ್‌ ಪ್ರಜಾಪ್ರಭುತ್ವ ರಾಷ್ಟ್ರಗಳು ಅತ್ಯುತ್ತಮ ಸ್ನೇಹ ಸಂಬಂಧ ಹೊಂದಿವೆ. ಧಾರ್ಮಿಕ ಸ್ವಾತಂತ್ರ್ಯ ಸೇರಿದಂತೆ ಹಲವು ವಿಷಯಗಳಲ್ಲಿ ಸಹಮತ ಹೊಂದಿವೆ’ ಎಂದು ಬ್ಲಿಂಕನ್‌ ಅವರು ಬುಧವಾರ ಭಾರತೀಯ ಸಿವಿಲ್‌ ಸೊಸೈಟಿ ಸದಸ್ಯರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.