ADVERTISEMENT

ರಕ್ಷಣಾ ಮೂಲಸೌಕರ್ಯ ಭಾರತ–ರಷ್ಯಾ ಒಪ್ಪಂದ?

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 20:12 IST
Last Updated 5 ಡಿಸೆಂಬರ್ 2021, 20:12 IST

ನವದೆಹಲಿ: ಭಾರತವು ರಷ್ಯಾ ಜತೆಗೆ ರಕ್ಷಣಾ ಮೂಲಸೌಕರ್ಯ ಹಂಚಿಕೆಯ ಒಪ್ಪಂದವನ್ನು ಮಾಡಿಕೊಳ್ಳಲಿದೆ. ಅಮೆರಿಕ ಜತೆಗೆ ಐದು ವರ್ಷಗಳ ಹಿಂದೆಯೇ ಇಂತಹ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಡುವೆ ಸೋಮವಾರ ಶೃಂಗಸಭೆ ನಡೆಯಲಿದೆ. ಈ ಸಭೆಯಲ್ಲಿ ಸುಮಾರು 10 ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ. ರಕ್ಷಣಾ ಮೂಲಸೌಕರ್ಯ ಹಂಚಿಕೆ ಒಪ್ಪಂದವೂ ಅದರಲ್ಲಿ ಒಂದು.

ಈ ಒಪ್ಪಂದಕ್ಕೆ ಸಹಿ ಮಾಡಿದರೆ, ಭಾರತ ಮತ್ತು ರಷ್ಯಾದ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಪರಸ್ಪರರ ರಕ್ಷಣಾ ಮೂಲಸೌಕರ್ಯಗಳನ್ನು ಬಳಸಿಕೊಳ್ಳಲು ಅವಕಾಶ ಇದೆ.

ರಷ್ಯಾದ ಕೆಎ–226 ಟಿ ಹೆಲಿಕಾಪ್ಟರ್‌ಗಳನ್ನು ಹಿಂದುಸ್ಥಾನ್‌ ಎರೊನಾಟಿಕ್ಸ್‌ ಲಿ.ನ (ಎಚ್‌ಎಎಲ್‌) ತುಮಕೂರು ಘಟಕದಲ್ಲಿ ತಯಾರಿಸುವ ಯೋಜನೆಯ ಕುರಿತು ಈಗಲೂ ಅನಿಶ್ಚಿತ ಸ್ಥಿತಿ ಇದೆ. ಹಾಗಾಗಿ, ರಷ್ಯಾದಿಂದ ಕೆಲವು ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಸಾಧ್ಯತೆ ಇದೆ.ರಷ್ಯಾದಿಂದ 60 ಹೆಲಿಕಾಪ್ಟರ್‌ಖರೀದಿ ಮತ್ತು 200 ಹೆಲಿಕಾಪ್ಟರ್‌ಗಳನ್ನು ಎಚ್‌ಎಎಲ್‌ನಲ್ಲಿ ತಯಾರಿಸುವುದಕ್ಕಾಗಿ ಭಾರತ ಮತ್ತು ರಷ್ಯಾ ಸರ್ಕಾರದ ನಡುವೆ 2015ರಲ್ಲಿ ಒಪ್ಪಂದ ಆಗಿತ್ತು. ಆದರೆ, ದರ ಮತ್ತು ಭಾರತದಲ್ಲಿ ತಯಾರಾಗುವ ಹೆಲಿಕಾಪ್ಟರ್‌ಗಳಲ್ಲಿ ದೇಶೀಯವಾಗಿ ತಯಾರಾದ ಬಿಡಿಭಾಗಗಳನ್ನು ಯಾವ ಪ್ರಮಾಣದಲ್ಲಿ ಬಳಸಬೇಕು ಎಂಬ ಬಗೆಗಿನ ಭಿನ್ನಮತವನ್ನು ಬಗೆಹರಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ.

ADVERTISEMENT

ಶೃಂಗಸಭೆಯ ಬಳಿಕ, ಭಾರತ ಮತ್ತು ರಷ್ಯಾ ನಡುವೆ 2+2 ಮಾತುಕತೆಯೂ ನಡೆಯಲಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ರಷ್ಯಾದ ರಕ್ಷಣಾ ಸಚಿವ ಸೆರ್ಗಿ ಶೊಯ್ಗು, ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್‌ ಅವರ ಜತೆಗೆ ದೆಹಲಿಯಲ್ಲಿ ಮಾತುಕತೆ ನಡೆಸಲಿದ್ದಾರೆ.

ರಕ್ಷಣಾ ಮೂಲಸೌಕರ್ಯ ಹಂಚಿಕೆ ಒಪ್ಪಂದದಿಂದಾಗಿ, ಆರ್ಕ್‌ಟಿಕ್‌ ಸಾಗರದಲ್ಲಿ ರಷ್ಯಾ ಹೊಂದಿರುವ ಬಂದರು ಸೌಲಭ್ಯವು ಭಾರತದ ಬಳಕೆಗೆ ದೊರೆಯಲಿದೆ. ಈ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚುತ್ತಿದೆ. ಹಾಗಾಗಿ, ರಷ್ಯಾದ ಜತೆಗಿನ ಒಪ್ಪಂದದಿಂದ ಭಾರತಕ್ಕೆ ಅನುಕೂಲ ಆಗಲಿದೆ.

ಹಲವು ದೇಶಗಳ ಜತೆ ಒಪ್ಪಂದ

ರಕ್ಷಣಾ ಮೂಲಸೌಕರ್ಯ ಹಂಚಿಕೆಗಾಗಿ ಹಲವು ದೇಶಗಳ ಜತೆಗೆ ಭಾರತವು ಒಪ್ಪಂದ ಮಾಡಿಕೊಂಡಿದೆ. 2016ರಲ್ಲಿ ಅಮೆರಿಕ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆಸ್ಟ್ರೇಲಿಯಾ, ಜಪಾನ್‌, ಫ್ರಾನ್ಸ್‌, ಸಿಂಗಪುರ, ದಕ್ಷಿಣ ಕೊರಿಯಾ ಜತೆಗೂ ಒಪ್ಪಂದ ಇದೆ. ವಿಯೆಟ್ನಾಂ ಮತ್ತು ಬ್ರಿಟನ್‌ ಜತೆಗೆ ಇಂತಹ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.