ADVERTISEMENT

ಸಿಡಿಎಸ್‌ ನೇಮಕ: ಚಾರಿತ್ರಿಕ ಘೋಷಣೆ

ಪಿಟಿಐ
Published 15 ಆಗಸ್ಟ್ 2019, 20:00 IST
Last Updated 15 ಆಗಸ್ಟ್ 2019, 20:00 IST
ರಾವತ್‌
ರಾವತ್‌   

ನವದೆಹಲಿ: ಕಾರ್ಗಿಲ್‌ ಸಂಘರ್ಷದ ಬಳಿಕ 1999ರಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಹುದ್ದೆ ಸೃಷ್ಟಿಯ ಪ್ರಸ್ತಾವ ಮುನ್ನೆಲೆಗೆ ಬಂದಿತ್ತು. ಈಗ, ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಕಾರ್ಯನಿರ್ವಹಣೆಯಲ್ಲಿ ಸಮನ್ವಯಕ್ಕಾಗಿ ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆ ಸೃಷ್ಟಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.

* ಮೂರು ಸೇನಾ ಪಡೆಗಳ ಮುಖ್ಯಸ್ಥರಿಗಿಂತ ಹಿರಿಯರಾದ ಒಬ್ಬರು ರಕ್ಷಣಾ ಪಡೆಗಳ ಮುಖ್ಯಸ್ಥರಾಗಲಿದ್ದಾರೆ

* ದೇಶದ ರಾಷ್ಟ್ರೀಯ ಭದ್ರತೆಯ ಬಗ್ಗೆ ಸಮಗ್ರವಾದ ಧೋರಣೆ ಅನುಸರಿಸಲು ಅನುಕೂಲ

ADVERTISEMENT

* ಪ್ರಧಾನಿ ಮತ್ತು ರಕ್ಷಣಾ ಸಚಿವರಿಗೆ ರಕ್ಷಣೆಗೆ ಸಂಬಂಧಿಸಿ ಸಲಹೆಗಾರರಾಗಿ ಸಿಡಿಎಸ್‌ ಕೆಲಸ

* ಸಿಡಿಎಸ್‌ ಸೇವಾವಧಿ ಮತ್ತು ಅವರ ಶ್ರೇಣಿ ಬಗ್ಗೆ ಮಾಹಿತಿ ಇಲ್ಲ. ಅವರು ಸೇನಾ ಪಡೆಗಳ ಮುಖ್ಯಸ್ಥರ ಶ್ರೇಣಿ ಹೊಂದಿರುತ್ತಾರೆಯೇ ಅಥವಾ ಅದಕ್ಕೂ ಮೇಲಿನ ಶ್ರೇಣಿಯಲ್ಲಿರುತ್ತಾರೆಯೇ ಎಂಬುದು ಗೊತ್ತಾಗಿಲ್ಲ

* ಪಶ್ಚಿಮದ ಹಲವು ದೇಶಗಳಲ್ಲಿ ಮೂರೂ ಸೇನಾಪಡೆಗಳಿಗೆ ಒಬ್ಬರೇ ಮುಖ್ಯಸ್ಥ ಇರುವ ವ್ಯವಸ್ಥೆ ಇದೆ

* ಸಿಡಿಎಸ್‌ ನೇಮಕದ ವಿಧಾನಗಳನ್ನು ಅಂತಿಮಗೊಳಿಸಲು ಉನ್ನತ ಮಟ್ಟದ ಸಮಿತಿ ನೇಮಕ ಪ್ರಕ್ರಿಯೆ ಆರಂಭ

ಹಿನ್ನೆಲೆ

* ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಗುರುತಿಸುವುದಕ್ಕಾಗಿ 1999ರಲ್ಲಿ ಉನ್ನತ ಮಟ್ಟದ ಸಮಿತಿ ರಚನೆ

* ರಕ್ಷಣಾ ಪಡೆಗಳಿಗೆ ಒಬ್ಬ ಮುಖ್ಯಸ್ಥನನ್ನು ನೇಮಿಸಬೇಕು ಎಂದು ಶಿಫಾರಸು ಮಾಡಿದ ಸಮಿತಿ

* ರಾಷ್ಟ್ರೀಯ ಭದ್ರತಾ ವ್ಯವಸ್ಥೆಯ ಸುಧಾರಣೆಗಾಗಿ ರಚಿಸಿದ ಸಚಿವರ ಗುಂಪು ಕೂಡ ಸಿಡಿಎಸ್‌ ನೇಮಕಕ್ಕೆ ಶಿಫಾರಸು ಮಾಡಿತ್ತು

* ಸೇನಾ ಮುಖ್ಯಸ್ಥರ ಸಮಿತಿಗೆ ಕಾಯಂ ಅಧ್ಯಕ್ಷರನ್ನು ನೇಮಿಸಲು ನರೇಶ್‌ ಚಂದ್ರ ಕಾರ್ಯಪಡೆ 2012ರಲ್ಲಿ ಸಲಹೆ ನೀಡಿತ್ತು

ಈಗಿನ ವ್ಯವಸ್ಥೆ ಏನು?

ಸೇನಾ ಪಡೆಗಳ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರು ಈಗ ಮೂರೂ ಪಡೆಗಳ ನಡುವಣ ಸಮನ್ವಯ ನೋಡಿಕೊಳ್ಳುತ್ತಾರೆ. ಭೂಸೇನೆ, ನೌಕಾಪಡೆ ಮತ್ತು ವಾಯು‍ಪಡೆಯ ಮುಖ್ಯಸ್ಥರು ಸಮಿತಿಯ ಸದಸ್ಯರು. ಇವರಲ್ಲಿ ಅತ್ಯಂತ ಹಿರಿಯರಾಗಿರುವವರು ಅಧ್ಯಕ್ಷರಾಗುತ್ತಾರೆ. ವಾಯುಪಡೆಯ ಮುಖ್ಯಸ್ಥ ಬಿ.ಎಸ್‌. ಧನೋಆ ಅವರು ಈಗ ಈ ಸಮಿತಿಗೆ ಅಧ್ಯಕ್ಷ

ಜ. ರಾವತ್‌ಗೆ ಅವಕಾಶ ಹೆಚ್ಚು

ಸೇವಾ ಜ್ಯೇಷ್ಠತೆ ಅಧಾರದಲ್ಲಿ ಸಿಡಿಎಸ್‌ ನೇಮಕ ಮಾಡಲು ಸರ್ಕಾರ ನಿರ್ಧರಿಸಿದರೆ ಭೂಸೇನಾ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಅವರು ಈ ಹುದ್ದೆಗೇರುವ ಸಾಧ್ಯತೆ ಹೆಚ್ಚು. ವಾಯುಪಡೆ ಮುಖ್ಯಸ್ಥ ಧನೋಆ ಅವರು ರಾವತ್‌ ಅವರಿಗಿಂತಲೂ ಹಿರಿಯ. ಆದರೆ, ಅವರು ಸೆ.30ರಂದು ನಿವೃತ್ತರಾಗಲಿದ್ದಾರೆ. ಹಾಗಾಗಿ, ಡಿ. 31ರವರೆಗೆ ಸೇವಾವಧಿ ಇರುವ ರಾವತ್‌ ಅವರು ಸಿಡಿಎಸ್‌ ಆಗಿ ಆಯ್ಕೆಯಾಗಬಹುದು.

***

ಸಿಡಿಎಸ್‌ ನೇಮಕದ ಚಾರಿತ್ರಿಕ ಘೋಷಣೆ ಮಾಡಿದ ಪ್ರಧಾನಿಗೆ ಕೃತಜ್ಞತೆ. ಈ ನಿರ್ಧಾರದಿಂದಾಗಿ ರಾಷ್ಟ್ರೀಯ ಸುರಕ್ಷತೆಯು ಇನ್ನಷ್ಟು ಪರಿಣಾಮಕಾರಿ ಮತ್ತು ಮಿತವ್ಯಯಕರವಾಗಲಿದೆ. ಜಂಟಿಸಹಭಾಗಿತ್ವ ಮತ್ತು ಬಹುಶಿಸ್ತೀಯ ಸಮನ್ವಯ ಖಚಿತವಾಗಲಿದೆ

ಜ. ವಿ.ಪಿ. ಮಲಿಕ್‌, ಭೂಸೇನೆಯ ಮಾಜಿ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.