ADVERTISEMENT

ಜಮ್ಮುವಿನಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಮೂವರಿಗೆ ಗಾಯ

ಭಾರಿ ಪ್ರಮಾಣದಲ್ಲಿ ಹಿಮ ಸುರಿಯುತ್ತಿದ್ದುದರಿಂದಾಗಿ ಜಿಲ್ಲಾ ಕೇಂದ್ರದಿಂದ ಸಂಪರ್ಕ ಕಡಿದುಕೊಂಡಿತ್ತು.

ಪಿಟಿಐ
Published 4 ಮೇ 2023, 10:31 IST
Last Updated 4 ಮೇ 2023, 10:31 IST
   

ಜಮ್ಮು: ‘ತಾಂತ್ರಿಕ ದೋಷದಿಂದಾಗಿ ಜಮ್ಮು ಮತ್ತು ಕಾಶ್ಮೀರದ ಕಿಸ್ತ್‌ವಾಡಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಗುರುವಾರ ಸೇನಾ ಹೆಲಿಕಾಪ್ಟರ್‌ ಪತನಗೊಂಡಿದೆ. ಇಬ್ಬರು ಪೈಲಟ್‌ಗಳು ಹಾಗೂ ಒಬ್ಬರು ತಾಂತ್ರಿಕ ಸಿಬ್ಬಂದಿ ಗಾಯಗೊಂಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಸೇನೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್‌ (ಎಎಲ್‌ಎಚ್‌) ಧ್ರುವ್‌, ಕಾರ್ಯಾಚರಣೆಗೆ ನಿಯೋಜನೆಗೊಂಡಿತ್ತು.

ಭಾರಿ ಪ್ರಮಾಣದಲ್ಲಿ ಹಿಮ ಸುರಿಯುತ್ತಿದ್ದುದರಿಂದಾಗಿ ಜಿಲ್ಲಾ ಕೇಂದ್ರದಿಂದ ಸಂಪರ್ಕ ಕಡಿದುಕೊಂಡಿತ್ತು. ಮುಂಜಾಗ್ರತಾ ದೃಷ್ಟಿಯಿಂದ ಪೈಲಟ್‌ಗಳು ಕಿಸ್ತ್‌ವಾಡಾ ಪ್ರದೇಶದಲ್ಲಿನ ಮರುವಾ ನದಿ ದಂಡೆಯ ಮೇಲೆ ಅದನ್ನು ಇಳಿಸಲು ಪ್ರಯತ್ನಿಸಿದ್ದರು. ಬೆಳಿಗ್ಗೆ 11.15ರ ಸುಮಾರಿಗೆ ಹೆಲಿಕಾಪ್ಟರ್‌ ಪತನಗೊಂಡಿದೆ’ ಎಂದು ಉಧಂಪುರ ಮೂಲದ ಉತ್ತರ ಕಮಾಂಡ್‌ ಪ್ರಕಟಣೆಯಲ್ಲಿ ತಿಳಿಸಿದೆ.

‘ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಪೈಲಟ್‌ಗಳು ಏರ್‌ ಟ್ರಾಫಿಕ್‌ ಕಂಟ್ರೋಲರ್‌ಗೆ (ಎಟಿಸಿ) ಈ ಕುರಿತ ಮಾಹಿತಿ ಒದಗಿಸಿದ್ದರು. ತುರ್ತು ಭೂಸ್ಪರ್ಶಕ್ಕೆ ಅನುಮತಿ ದೊರೆತ ನಂತರ ಅದನ್ನು ಕೆಳಕ್ಕೆ ಇಳಿಸಲು ಮುಂದಾಗಿದ್ದರು’ ಎಂದು ಹೇಳಿದೆ. 

ADVERTISEMENT

‘ಬಂಡೆಗಳಿಂದ ಕೂಡಿದ ಹಾಗೂ ಗಿಡ ಗಂಟಿಗಳು ಬೆಳೆದಿದ್ದ ಜಾಗದಲ್ಲಿ ಹೆಲಿಕಾಪ್ಟರ್‌ ಇಳಿಸಿದ್ದರಿಂದಾಗಿ ಅದು ದುರಂತಕ್ಕೀಡಾಗಿದೆ. ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಅದರಲ್ಲಿದ್ದ ಸಿಬ್ಬಂದಿಯನ್ನು ಕಾಪಾಡಲಾಗಿದೆ. ಸೇನೆಯ ರಕ್ಷಣಾ ತಂಡಗಳೂ ಸ್ಥಳಕ್ಕೆ ಧಾವಿಸಿದ್ದವು’ ಎಂದು ಮಾಹಿತಿ ನೀಡಲಾಗಿದೆ. 

‘ಘಟನೆಯ ಕುರಿತು ಆಂತರಿಕ ತನಿಖೆ ನಡೆಸುವಂತೆ ಆದೇಶಿಸಲಾಗಿದೆ. ಈ ಕುರಿತ ವಿವರವಾದ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ’ ಎಂದು ಸೇನಾ ಪ್ರಕಟಣೆ ಹೇಳಿದೆ.

‘ಗಾಯಾಳುಗಳನ್ನು ಚಿಕಿತ್ಸೆಗಾಗಿ ಉಧಂಪುರದಲ್ಲಿನ ಕಮಾಂಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದಾರೆ. ಗಾಯಗೊಂಡಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದು ಆರೈಕೆ ಮಾಡಿದ್ದಾರೆ’ ಎಂದು ತಿಳಿಸಿದೆ.  ‘ನದಿ ದಂಡೆಯಲ್ಲಿ ಹೆಲಿಕಾಪ್ಟರ್‌ನ ಅವಶೇಷ ಪತ್ತೆಯಾಗಿದೆ’ ಎಂದು ಕಿಸ್ತ್‌ವಾಡಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಖಲೀಲ್‌ ಅಹ್ಮದ್‌ ಪೊಸ್ವಾಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.