ADVERTISEMENT

‘ರಾಮನ ದರ್ಶನ’ಕ್ಕೆ ಎಕ್ಸ್‌ಪ್ರೆಸ್‌ ರೈಲು

ಭಾರತೀಯ ರೈಲ್ವೆಯಿಂದ ಹೊಸ ಯೋಜನೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 17:05 IST
Last Updated 14 ನವೆಂಬರ್ 2018, 17:05 IST
ನವದೆಹಲಿಯಲ್ಲಿ ಬುಧವಾರ ಶ್ರೀ ರಾಮಾಯಾಣ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಲಾಯಿತು ಪಿಟಿಐ ಚಿತ್ರ
ನವದೆಹಲಿಯಲ್ಲಿ ಬುಧವಾರ ಶ್ರೀ ರಾಮಾಯಾಣ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಲಾಯಿತು ಪಿಟಿಐ ಚಿತ್ರ   

ನವದೆಹಲಿ: ಶ್ರೀ ರಾಮನ ಬದುಕಿನ ಹೆಜ್ಜೆ ಗುರುತುಗಳ ದರ್ಶನ ಮಾಡಿಸುವ ಅವಕಾಶವನ್ನು ಭಾರತೀಯ ರೈಲ್ವೆ ಕಲ್ಪಿಸಿದೆ.

‘ಶ್ರೀ ರಾಮಾಯಣ ಎಕ್ಸ್‌ಪ್ರೆಸ್‌’ ಹೆಸರಿನಲ್ಲಿ ಪ್ರವಾಸಿಗರನ್ನು ಅಯೋಧ್ಯೆಯಿಂದ ರಾಮೇಶ್ವರಂ ಮೂಲಕ ಕೊಲಂಬೊವರೆಗೆ ಶ್ರೀರಾಮನ ಯಾತ್ರಾ ಸ್ಥಳಗಳಿಗೆ ಕರೆದೊಯ್ಯುವ ಯೋಜನೆಯನ್ನು ಭಾರತೀಯ ರೈಲ್ವೆ ಕೈಗೊಂಡಿದೆ. ವಿಶೇಷ ಪ್ರವಾಸಿಗರ ರೈಲು ಇದಾಗಿದ್ದು, ಬುಧವಾರ ಚಾಲನೆ ದೊರೆತಿದೆ.

16 ದಿನಗಳ ಪ್ರವಾಸದ ಪ್ಯಾಕೇಜ್‌ ವ್ಯವಸ್ಥೆಯನ್ನು ಇದು ಒಳಗೊಂಡಿದೆ. 'ಶ್ರೀ ರಾಮಾಯಣ ಎಕ್ಸ್‌ಪ್ರೆಸ್‌' ವಿಶೇಷ ರೈಲಿನಲ್ಲಿ 800 ಮಂದಿ ಪ್ರಯಾಣಿಸಲು ಅವಕಾಶವಿದೆ.

ADVERTISEMENT

ಪ್ರತಿಯೊಬ್ಬ ಯಾತ್ರಿಕನಿಗೆ ₹15,120 ನಿಗದಿ ಮಾಡಲಾಗಿದ್ದು, ದೆಹಲಿಯಿಂದ ಯಾತ್ರೆ ಆರಂಭವಾಗಿದೆ. ಅಯೋಧ್ಯೆಯಲ್ಲಿ ಮೊದಲ ನಿಲುಗಡೆಯಾಗಲಿದೆ.

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಹನುಮಾನ್‌ಗಡಿ ಮತ್ತು ಕನಕಭವನ ದೇವಾಲಯ ದರ್ಶನದ ಬಳಿಕ ನಂದಿಗ್ರಾಮಕ್ಕೆ ತೆರಳಲಿದೆ. ಅಲ್ಲಿಂದ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದೆ. ಕರ್ನಾಟಕದ ಹಂಪಿಯೂ ಇದರಲ್ಲಿ ಸೇರಿದೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈಯಿಂದ ವಿಮಾನದ ಮೂಲಕ ಶ್ರೀಲಂಕಾದ ಕೊಲಂಬೊಗೆ ತೆರಳಿ ಅಲ್ಲಿಂದ ಮತ್ತೆ ಪ್ರವಾಸ ಮುಂದುವರಿಯಲಿದೆ. ಐದು ದಿನಗಳ ಶ್ರೀಲಂಕಾ ಪ್ರವಾಸಕ್ಕೆ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ. ಇದಕ್ಕಾಗಿ ಪ್ರತಿಯೊಬ್ಬ ಪ್ರವಾಸಿಗ ₹36,970 ಪಾವತಿಸಬೇಕಾಗುತ್ತದೆ. ಕಂಡ್ಯಾ, ನುವುರಾ ಎಲಿಯಾ, ಕೊಲಂಬೊ ಮತ್ತು ನೆಗೊಂಬೊ ಯಾತ್ರಾ ಸ್ಥಳಗಳನ್ನು ಇದು ಒಳಗೊಂಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ರೈಲಿನಲ್ಲಿ ಆಹಾರ ಪೂರೈಕೆ, ವಸತಿ ಸಹಿತ ಸೌಲಭ್ಯಗಳು ಪ್ಯಾಕೇಜ್‌ ವೆಚ್ಚದಲ್ಲೇ ಸೇರಿವೆ.

ಯಾತ್ರಾ ಸ್ಥಳಗಳು

ದೆಹಲಿ, ಅಯೋಧ್ಯೆ, ನಂದಿಗ್ರಾಮ, ಸೀತಾಮರ್ಹಿ, ಜನಕಪುರಿ, ವಾರಾಣಸಿ, ಪ್ರಯಾಗ, ಶೃಂಗವರಪುರ, ಚಿತ್ರಕೂಟ, ನಾಸಿಕ್‌, ಹಂಪಿ ಮತ್ತು ರಾಮೇಶ್ವರ, ಕೊಲಂಬೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.