ADVERTISEMENT

ಭಾರತದ ರಾಷ್ಟ್ರೀಯ ಭದ್ರತಾ ಸವಾಲುಗಳು ಹೆಚ್ಚಾಗುತ್ತಿವೆ: ರಾಜನಾಥ್ ಸಿಂಗ್

ಪಿಟಿಐ
Published 19 ಆಗಸ್ಟ್ 2021, 9:39 IST
Last Updated 19 ಆಗಸ್ಟ್ 2021, 9:39 IST
ರಾಜನಾಥ್ ಸಿಂಗ್: ಪಿಟಿಐ ಚಿತ್ರ
ರಾಜನಾಥ್ ಸಿಂಗ್: ಪಿಟಿಐ ಚಿತ್ರ   

ನವದೆಹಲಿ: ಜಾಗತಿಕ ಮಟ್ಟದಲ್ಲಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಭಾರತದ ರಾಷ್ಟ್ರೀಯ ಭದ್ರತಾ ಸವಾಲುಗಳು ಹೆಚ್ಚಾಗುತ್ತಿವೆ ಮತ್ತು ಸಂಕೀರ್ಣವಾಗುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಹಾಗಾಗಿ, ದೇಶದಲ್ಲಿ ಬಲವಾದ, ಸಮರ್ಥ ಮತ್ತು ಸಂಪೂರ್ಣ 'ಸ್ವಾವಲಂಬಿ' ರಕ್ಷಣಾ ಉದ್ಯಮದ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಅಫ್ಗಾನಿಸ್ತಾನದಲ್ಲಿ ಅಮೆರಿಕ ಬೆಂಬಲಿತ ಸರ್ಕಾರ ಪತನಗೊಂಡು ತಾಲಿಬಾನ್‌ಗಳು ಹಿಡಿತ ಸಾಧಿಸಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಇತರೆಡೆಗಳಲ್ಲಿ ಆತಂಕದ ವಾತಾವರಣವಿದೆ.

‘ಇಂದು, ಇಡೀ ಜಗತ್ತಿನಲ್ಲಿ ಭದ್ರತಾ ಸನ್ನಿವೇಶವು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಈ ಕಾರಣದಿಂದಾಗಿ, ನಮ್ಮ ರಾಷ್ಟ್ರೀಯ ಭದ್ರತೆಗೆ ಸವಾಲುಗಳು ಹೆಚ್ಚುತ್ತಿವೆ ಮತ್ತು ಸಂಕೀರ್ಣವಾಗುತ್ತಿವೆ. ಜಾಗತಿಕ ಭೌಗೋಳಿಕ ರಾಜಕೀಯ ಪರಿಸ್ಥಿತಿಯಲ್ಲಿ ನಿರಂತರ ಬದಲಾವಣೆಗಳಾಗುತ್ತಿವೆ’ಎಂದು ಸಿಂಗ್ ಯಾವುದೇ ನಿರ್ದಿಷ್ಟ ದೇಶವನ್ನು ಉಲ್ಲೇಖ ಮಾಡದೆ ಹೇಳಿದರು.

ADVERTISEMENT

'ಡಿಫೆನ್ಸ್ ಇಂಡಿಯಾ ಸ್ಟಾರ್ಟಪ್ ಚಾಲೆಂಜ್ 5.0' ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ವೇಗವಾಗಿ ಬದಲಾಗುತ್ತಿರುವ ಭದ್ರತಾ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಸಶಸ್ತ್ರ ಪಡೆಗಳ ಅಗತ್ಯಗಳನ್ನು ಪೂರೈಸಲು ಭಾರತವು ಬಲವಾದ, ಸಮರ್ಥ ಮತ್ತು 'ಸ್ವಾವಲಂಬಿ' ರಕ್ಷಣಾ ಉದ್ಯಮವನ್ನು ಹೊಂದುವತ್ತ ಗಮನ ಹರಿಸಬೇಕು ಎಂದು ಹೇಳಿದರು.

‘ನಾವು ಬಲವಾದ, ಆಧುನಿಕ ಮತ್ತು ಸುಸಜ್ಜಿತ ಪಡೆಗಳನ್ನು ಸೃಷ್ಟಿಸುವುದು ಮಾತ್ರವಲ್ಲ, ನಮ್ಮ ರಕ್ಷಣಾ ಉದ್ಯಮವನ್ನು ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ, ಅದೂ ಸಹ ಅಷ್ಟೇ ಬಲಿಷ್ಠ, ಸಮರ್ಥ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸಂಪೂರ್ಣವಾಗಿ ಸ್ವಾವಲಂಬಿಯಾಗಿರಬೇಕು’ಎಂದು ರಕ್ಷಣಾ ಸಚಿವರು ಹೇಳಿದರು.

ರಕ್ಷಣಾ ಉತ್ಪಾದನಾ ವಲಯವನ್ನು ಬಲಪಡಿಸಲು ಖಾಸಗಿ ವಲಯವು ಕೊಡುಗೆ ನೀಡಬೇಕೆಂದು ರಕ್ಷಣಾ ಸಚಿವರು ಕರೆ ನೀಡಿದರು.

‘ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸಹಕಾರವನ್ನು ಭರವಸೆ ನೀಡುವಾಗ, ಖಾಸಗಿ ವಲಯವು ಮುಂದೆ ಬರಬೇಕು. ಬಲವಾದ ಮತ್ತು ಸ್ವಾವಲಂಬಿ ರಕ್ಷಣಾ ವಲಯವನ್ನು ನಿರ್ಮಿಸಲು ಕೊಡುಗೆ ನೀಡಬೇಕು’ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.