ADVERTISEMENT

ಸೇನೆಗೆ ಅಪಮಾನ ಮಾಡಿದ ಬಿಜೆಪಿ: ಕಾಂಗ್ರೆಸ್‌ ಆರೋಪ

ಮಧ್ಯಪ್ರದೇಶದ ಡಿಸಿಎಂ ಜಗದೀಶ ದೇವಡಾ ವಜಾಕ್ಕೆ ಆಗ್ರಹ

ಪಿಟಿಐ
Published 16 ಮೇ 2025, 16:00 IST
Last Updated 16 ಮೇ 2025, 16:00 IST
<div class="paragraphs"><p>ಬಿಜೆಪಿ, ಕಾಂಗ್ರೆಸ್‌</p></div>

ಬಿಜೆಪಿ, ಕಾಂಗ್ರೆಸ್‌

   

ನವದೆಹಲಿ: ಭಾರತೀಯ ಸೇನೆಯನ್ನು ಬಿಜೆಪಿ ಅಪಮಾನ ಮಾಡಿದೆ ಎಂದು ಕಾಂಗ್ರೆಸ್‌ ಶುಕ್ರವಾರ ಆರೋಪಿಸಿದ್ದು, ಸೇನಾ ಪಡೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವ ಮಧ್ಯಪ್ರದೇಶದ ಉಪ ಮುಖ್ಯಮಂತ್ರಿ ಜಗದೀಶ ದೇವಡಾ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದೆ. 

ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ದೇವಡಾ ಅವರು, ‘ಭಯೋತ್ಪಾದನೆಯನ್ನು ಪೋಷಿಸುವವರಿಗೆ ನೀಡಿದ ತಕ್ಕ ಉತ್ತರಕ್ಕಾಗಿ ನಾವು ಪ್ರಧಾನಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಪ್ರಧಾನಿ ಮೋದಿ ಜಿ ಅವರ ಪಾದಗಳಿಗೆ ಇಡೀ ದೇಶ, ದೇಶದ ಸೇನೆ ಮತ್ತು ಸೈನಿಕರು ತಲೆಬಾಗುತ್ತಾರೆ...’ ಎಂದು ಹೇಳಿಕೆ ನೀಡಿದ್ದರು.

ADVERTISEMENT

ಆಪರೇಷನ್ ಸಿಂಧೂರ ಕುರಿತು ಮಾಧ್ಯಮಗೋಷ್ಠಿಗಳಲ್ಲಿ ಸಶಸ್ತ್ರ ಪಡೆಗಳ ಪ್ರಮುಖ ಮುಖವಾಗಿ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರೊಂದಿಗೆ ಪಾಲ್ಗೊಂಡಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು ಟೀಕೆಗೆ ಗುರಿಯಾದ ಕೆಲವೇ ದಿನಗಳಲ್ಲಿ ದೇವಡಾ ಅವರಿಂದ ಈ ಹೇಳಿಕೆಗಳು ಬಂದಿವೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ‘ಬಿಜೆಪಿ ನಾಯಕರು ನಮ್ಮ ಸೇನೆಯನ್ನು ನಿರಂತರವಾಗಿ ಅವಮಾನಿಸುತ್ತಿರುವುದು ಅತ್ಯಂತ ನಾಚಿಕೆಗೇಡು ಮತ್ತು ದುರದೃಷ್ಟಕರ. ಮೊದಲು ಮಧ್ಯಪ್ರದೇಶದ ಸಚಿವರೊಬ್ಬರು ಮಹಿಳಾ ಸೇನಾಧಿಕಾರಿ ಬಗ್ಗೆ ಅಸಭ್ಯ ಹೇಳಿಕೆ ನೀಡಿದರು. ಈಗ ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಸೇನೆಯನ್ನು ತುಂಬಾ ಅವಮಾನಿಸಿದ್ದಾರೆ’ ಎಂದು ಹರಿಹಾಯ್ದಿದ್ದಾರೆ.

ಸೇನೆ ಮತ್ತು ಯೋಧರಿಗೆ ಅಪಮಾನ ಮಾಡುವ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಅವರನ್ನು ಉಳಿಸಲು ಬಿಜೆಪಿ ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದೆ. ಹೀಗೆ ಮಾಡುವ ಮೂಲಕ ಬಿಜೆಪಿ ನಮ್ಮ ಸೇನೆ ಮತ್ತು ದೇಶದ ಜನರಿಗೆ ಯಾವ ಸಂದೇಶವನ್ನು ನೀಡಲು ಬಯಸುತ್ತದೆ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

‘ನಾವು ದೇವಡಾ ಅವರ ಹೇಳಿಕೆಯನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಅವರ ನಿರ್ಲಜ್ಜ ಹೇಳಿಕೆಗಾಗಿ ಅವರನ್ನು ತಕ್ಷಣವೇ ವಜಾಗೊಳಿಸಬೇಕು. ಬಿಜೆಪಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿಫಲವಾದರೆ, ಇದು ಪಕ್ಷದ ಅನುಮತಿಯೊಂದಿಗೆ ನೀಡಿದ ಹೇಳಿಕೆಯಾಗಲಿದೆ ಮತ್ತು ಅದಕ್ಕೆ ಪಕ್ಷದ ಬೆಂಬಲವಿದೆ ಎಂದರ್ಥ’ ಎಂದು ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನಾಥೆ ಹೇಳಿದ್ದಾರೆ.

ಮಧ್ಯಪ್ರದೇಶದ ಮತ್ತೊಬ್ಬ ಸಚಿವ ಶಾ ಅವರು ಭಾರತದ ಅತ್ಯಂತ ಗೌರವಾನ್ವಿತ ಸೇನಾಧಿಕಾರಿಯಲ್ಲಿ ಒಬ್ಬರಾದ ಕರ್ನಲ್ ಖುರೇಷಿಯವರನ್ನು ಅವಮಾನಿಸಿದ್ದಾರೆ. ಆದರೂ ಬಿಜೆಪಿ ಅವರನ್ನು ಪ್ರಶ್ನಿಸಿಲ್ಲ ಮತ್ತು ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.