ನವದೆಹಲಿ: ‘ಆಪರೇಷನ್ ಸಿಂಧೂರ’ದ ವೇಳೆ ಮೂರೂ ಸೇನಾ ಪಡೆಗಳು ಏಕೀಕೃತವಾಗಿ ನೈಜ ಸಮಯದಲ್ಲಿ ನಡೆಸಿದ ಕಾರ್ಯಾಚರಣೆಯು ನಿರ್ಣಾಯಕ ಫಲಿತಾಂಶ ನೀಡಿದ ಜೀವಂತ ಉದಾಹರಣೆಯಾಗಿದೆ. ಭವಿಷ್ಯದಲ್ಲಿ ಎದುರಾಗುವ ಎಲ್ಲ ಸೇನಾ ಕಾರ್ಯಾಚರಣೆಗಳಿಗೂ ಇದು ಮಾದರಿ ಎನ್ನುವಂತಾಗಿದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.
ಭಾರತೀಯ ವಾಯುಪಡೆಯಿಂದ ಇಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಭಾರತ ಹಾಗೂ ಪಾಕಿಸ್ತಾನದ ನಡುವೆ ಮೇ 7ರಿಂದ 10ರವರೆಗೆ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಯ ಏರ್ ಕಮಾಂಡ್ ಮತ್ತು ಆಕಾಶ್‌ತೀರ್ ಸಮಗ್ರ ವ್ಯವಸ್ಥೆ ಹಾಗೂ ಭಾರತೀಯ ನೌಕಾಪಡೆಯ ‘ತ್ರಿಗುಣ್’ ವ್ಯವಸ್ಥೆಯು ಜಂಟಿಯಾಗಿ ಹೇಗೆ ಕೆಲಸ ಮಾಡಿತು ಎಂಬುದನ್ನು ಅವರು ಉಲ್ಲೇಖಿಸಿದರು.
‘ಸಹಕಾರ, ಜಂಟಿ ಮಾತುಕತೆ, ಸಂಪ್ರದಾಯದ ತಿಳಿವಳಿಕೆ ಹಾಗೂ ಪರಸ್ಪರ ಗೌರವ ಇಟ್ಟುಕೊಂಡು ಜೊತೆಗೂಡಿ ಮೂರೂ ಪಡೆಗಳ ನಡುವೆ ಹೊಸ ವ್ಯವಸ್ಥೆಯನ್ನು ರೂಪಿಸಬೇಕಿದೆ. ಸೇನಾಪಡೆಗಳ ಏಕೀಕೃತ ವ್ಯವಸ್ಥೆಯನ್ನು ಕೇವಲ ನೀತಿ ರೂಪಿಸಬೇಕು ಎಂಬ ದೃಷ್ಟಿಯಿಂದ ಮಾಡಿಲ್ಲ, ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ರಕ್ಷಣಾ ವಲಯದ ಉಳಿವಿಗೂ ಇದು ನಿರ್ಣಾಯಕವಾಗಿದೆ’ ಎಂದು ಒತ್ತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.