ADVERTISEMENT

‘ತೌತೆ’ ಚಂಡಮಾರುತ: ಮಹಾರಾಷ್ಟ್ರದಲ್ಲಿ 3 ಸಾವು

ಮುಂಬೈಯಲ್ಲಿ ಭಾರಿ ಗಾಳಿ, ಮಳೆ ಸಾಧ್ಯತೆ

ಪಿಟಿಐ
Published 18 ಮೇ 2021, 5:38 IST
Last Updated 18 ಮೇ 2021, 5:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ‘ತೌತೆ’ ಚಂಡಮಾರುತದ ಪ್ರಭಾವದಿಂದಾಗಿ ಮುಂಬೈ ನಗರ ಮತ್ತು ಉಪನಗರಗಳಲ್ಲಿ ಮಂಗಳವಾರ ಕೆಲ ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಹೇಳಿದೆ.

‘ಮಳೆಯೊಂದಿಗೆ 80–90 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ ಎಂಬುದಾಗಿ ಐಎಂಡಿಯು ಮುನ್ನೆಚ್ಚರಿಕೆ ನೀಡಿದೆ’ ಎಂದು ಬೃಹನ್‌ ಮುಂಬೈ ಮಹಾನಗರ ಪಾಲಿಕೆಯು (ಬಿಎಂಸಿ) ತಿಳಿಸಿದೆ.

‘ಚಂಡಮಾರುತ ಸಂಬಂಧಿತ ಘಟನೆಯಲ್ಲಿ ಪಾಲ್ಘಾರ್‌ನಲ್ಲಿ ಇಬ್ಬರು ಮತ್ತು ಠಾಣೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ’ ಎಂದು ಅಧಿಕಾರಿಗಳು ಹೇಳಿದರು.

ADVERTISEMENT

‘ಸೋಮವಾರ ಬೆಳಿಗ್ಗೆ 8.30 ರಿಂದ ಸಂಜೆ 5.30 ನಡುವೆ ‘ತೌತೆ’ ಚಂಡಮಾರುತವು ಮುಂಬೈ ಕರಾವಳಿಯಿಂದ ಗುಜರಾತ್‌ ಕಡೆಗೆ ಹೋಗುತ್ತಿದ್ದ ವೇಳೆ ಕೊಲಾಬಾದಲ್ಲಿ 189 ಮಿ.ಮೀ ಮತ್ತು ಸಾಂತಾಕ್ರೂಜ್‌ ನಲ್ಲಿ 194 ಮಿ.ಮೀ ಮಳೆ ದಾಖಲಾಗಿದೆ’ ಎಂದು ಬಿಎಂಸಿ ತಿಳಿಸಿದೆ.

ಸೋಮವಾರ ಮುಂಬೈ ಮತ್ತು ನೆರೆ ಪ್ರದೇಶಗಳಲ್ಲಿ 114 ಕಿ.ಮೀ ವೇಗದಲ್ಲಿ ಗಾಳಿ ಮತ್ತು ಮಳೆಯಾಗಿದೆ. ಈ ವೇಳೆ ಪಾಲ್ಘಾರ್‌ನಲ್ಲಿ ಆಟೋ ಮೇಲೆ ಮರ ಬಿದ್ದು ಚಾಲಕ ಮೃತಪಟ್ಟಿದ್ದು, ಕಾಶಿಮಿರಾದಲ್ಲಿ ಒಬ್ಬ ಮಹಿಳೆ ಮತ್ತು ವಾಲಿಯಾದಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ.

‘ಮಂಗಳವಾರ ಠಾಣೆಯ ಲೋಕಪುರಂನಲ್ಲಿ ಕಟ್ಟಡವೊಂದು ಕುಸಿದಿದೆ. ಆದರೆ ಯಾವುದೇ ಪ್ರಾಣ ಹಾನಿ ಆಗಿಲ್ಲ. ಹಲವೆಡೆ ಮರಗಳು ಮತ್ತು ವಿದ್ಯುತ್‌ ಕಂಬಗಳು ಧರೆಗುರುಳಿವೆ. ಈ ವೇಳೆ ಆರು ಕಾರುಗಳು ಹಾನಿಗೊಳಗಾಗಿವೆ’ ಎಂದು ಪ್ರಾದೇಶಿಕ ವಿಪತ್ತು ನಿರ್ವಹಣಾ ಘಟಕದ(ಆರ್‌ಡಿಎಂಸಿ) ಮುಖ್ಯಸ್ಥ ಸಂತೋಷ್‌ ಕದಂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.