ADVERTISEMENT

ಅಂತರ್‌ ಧರ್ಮೀಯ ಮದುವೆಗೆ ಪೊಲೀಸ್ ರಕ್ಷಣೆ: ಹೈಕೋರ್ಟ್‌

ಗುಜರಾತ್ ಹೈಕೋರ್ಟ್‌ನ ವಿಭಾಗೀಯ ಪೀಠ ನಿರ್ದೇಶನ

ಪಿಟಿಐ
Published 10 ಫೆಬ್ರುವರಿ 2021, 11:40 IST
Last Updated 10 ಫೆಬ್ರುವರಿ 2021, 11:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್: ಅನ್ಯ ಧರ್ಮದ ಯುವಕನನ್ನು ವಿವಾಹವಾಗುತ್ತಿರುವ ಯುವತಿಗೆ, ಮದುವೆ ನೋಂದಣಿ ಮಾಡಿಸುವುದಕ್ಕಾಗಿ ಜುನಾಗಡದಿಂದ ಅಹಮದಾಬಾದ್‌ಗೆ ತೆರಳಲು ಪೊಲೀಸರು ರಕ್ಷಣೆ ನೀಡಬೇಕು ಎಂದು ಗುಜರಾತ್‌ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಂಗಳವಾರ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೋನಿಯಾ ಗೋಕಣಿ ಮತ್ತು ಸಂಗೀತಾ ಕೆ. ವಿಶೇನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ಯುವತಿ, ಮುಸ್ಲಿಂ ಯುವಕನನ್ನು ಮದುವೆಯಾಗುವ ತನ್ನ ನಿರ್ಧಾರ ತಿಳಿಸಿದಾಗ, ಆಕೆಯ ಪೋಷಕರು ವಿರೋಧ ವ್ಯಕ್ತಪಡಿಸಿದರು. ಈ ಕಾರಣದಿಂದಾಗಿ ಯುವಕ ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ADVERTISEMENT

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ವಿಶೇಷ ವಿವಾಹ ಕಾಯ್ದೆ ಅಡಿ ಫೆ.9 ರಂದು ರಿಜಿಸ್ಟರ್‌ ವಿವಾಹವಾಗುವಂತೆ ನಿರ್ದೇಶನ ನೀಡಿತು. ಮದುವೆ ನೋಂದಣಿ ಮಾಡಿಸಲು ಜುನಾಗಡದಿಂದ ಅಹಮದಾಬಾದ್‌ವರೆಗೆ ಆ ಯುವತಿಯನ್ನು ಮಹಿಳಾ ಪೋಲೀಸ್ ಸಿಬ್ಬಂದಿ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಯ ರಕ್ಷಣೆಯಲ್ಲಿ ಪೊಲೀಸ್ ವಾಹನದಲ್ಲಿ ಕಳುಹಿಸಿಕೊಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತು.

ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ಫೆ.12ಕ್ಕೆ ಮುಂದೂಡಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.