ADVERTISEMENT

ಕಾಶ್ಮೀರದಲ್ಲಿ ಮುಂದುವರಿದ ಹಿಮಪಾತ: ವಿಮಾನ ಹಾರಾಟಕ್ಕೆ ಅಡಚಣೆ

ಪಿಟಿಐ
Published 12 ಜನವರಿ 2019, 13:31 IST
Last Updated 12 ಜನವರಿ 2019, 13:31 IST
ಜಮ್ಮು ಮತ್ತು ಕಾಶ್ಮೀರದ ಬಾರಮುಲ್ಲಾದಲ್ಲಿ ಭಾರಿ ಹಿಮಪಾತ ಸಂಭವಿಸಿದ್ದು, ಅದರ ಮಧ್ಯೆಯೇ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿರುವುದು. –ಪಿಟಿಐ ಚಿತ್ರ
ಜಮ್ಮು ಮತ್ತು ಕಾಶ್ಮೀರದ ಬಾರಮುಲ್ಲಾದಲ್ಲಿ ಭಾರಿ ಹಿಮಪಾತ ಸಂಭವಿಸಿದ್ದು, ಅದರ ಮಧ್ಯೆಯೇ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿರುವುದು. –ಪಿಟಿಐ ಚಿತ್ರ   

ಶ್ರೀನಗರ: ಕಾಶ್ಮೀರದಲ್ಲಿ ನಿರಂತರ ಹಿಮಪಾತ ಶನಿವಾರವೂ ಮುಂದುವರಿದಿದ್ದು, ಇದರಿಂದಾಗಿ ಶ್ರೀನಗರದ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟಕ್ಕೆ ಅಡಚಣೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನಿರಂತರ ಹಿಮಪಾತ, ಮಂದ ಬೆಳಕಿನ ಕಾರಣ ಶ್ರೀನಗರ ವಿಮಾನ ನಿಲ್ದಾಣದಿಂದ ಕೆಲವು ವಿಮಾನಗಳು ವಿಳಂಬವಾಗಿ ಹಾರಾಟ ಆರಂಭಿಸಿದರೆ, ಮೂರು ವಿಮಾನಗಳ ಹಾರಾಟ ರದ್ದುಗೊಳಿಸಲಾಯಿತು’ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶದ ವಿವಿಧ ಭಾಗಗಳಿಂದ ಕಾಶ್ಮೀರ ಕಣಿವೆಯನ್ನು ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಮೂಲಕವೇ ಸಂಪರ್ಕಿಸುವ ಅನಿವಾರ್ಯತೆ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಸಂಚಾರ ನಿಯಂತ್ರಣ ಕೊಠಡಿ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಶ್ರೀನಗರದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಗುರುವಾರ ರಾತ್ರಿ ಮೈನಸ್‌ 0.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಶುಕ್ರವಾರ ರಾತ್ರಿ ಸ್ವಲ್ಪಮಟ್ಟಿಗೆ ಏರಿಕೆಯಾಗಿ ಮೈನಸ್‌ 1 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು ಎಂದು ಅವರು ತಿಳಿಸಿದ್ದಾರೆ.

ಕಾಶ್ಮೀರದ ಬಹುತೇಕ ಭಾಗಗಳಲ್ಲಿ ಎರಡನೇ ದಿನವೂ ನಿರಂತರ ಹಿಮ ಸುರಿಯುವುದು ಮುಂದುವರಿದಿದೆ. ಭಾನುವಾರ ವಾತಾವರಣ ಸ್ಪಲ್ಪಮಟ್ಟಿಗೆ ಸುಧಾರಿಸುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.