ADVERTISEMENT

ಅವಕಾಶ ಕಳೆದುಕೊಂಡ ಕೋರ್ಟ್‌!

ಜಯ್ನಾ ಕೊಠಾರಿ
Published 10 ಜನವರಿ 2020, 20:00 IST
Last Updated 10 ಜನವರಿ 2020, 20:00 IST
ಜಯ್ನಾ ಕೊಠಾರಿ
ಜಯ್ನಾ ಕೊಠಾರಿ   

ಸುಪ್ರೀಂ ಕೋರ್ಟ್‌ ಶುಕ್ರವಾರ ನೀಡಿದ ತೀರ್ಪಿಗೆ ಸಂಬಂಧಿಸಿದ ಅರ್ಜಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪರ್ಕ ಮಾಧ್ಯಮಗಳು, ಇಂಟರ್ನೆಟ್‌ ಮೇಲೆ ನಿರ್ಬಂಧ ವಿಧಿಸಿದ್ದನ್ನು ಪ್ರಶ್ನಿಸಲಾಗಿತ್ತು. ಆದರೆ, ಇಂಟರ್ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಿ ಸರ್ಕಾರ ಹೊರಡಿಸಿದ ಯಾವ ಆದೇಶವನ್ನೂ ಕೋರ್ಟ್‌ಗೆ ಹಾಜರುಪಡಿಸಿರಲಿಲ್ಲ. ಆ ಆದೇಶಗಳು ಅರ್ಜಿದಾರರ ಕೈಯಲ್ಲೂ ಇರಲಿಲ್ಲ. ‘ಆ ಆದೇಶಗಳನ್ನು ಸರ್ಕಾರ ತಮಗೆ ಲಭ್ಯವಾಗಿಸಿಲ್ಲ’ ಎಂದು ಅರ್ಜಿದಾರರು ಹೇಳಿದ್ದರು.

ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ ಆದೇಶಗಳನ್ನು ಲಭ್ಯವಾಗಿಸಬೇಕು ಎಂದು ಕೋರ್ಟ್‌ ಹೇಳಿತ್ತು. ಹೀಗಿದ್ದರೂ ಸರ್ಕಾರ ಅದನ್ನು ನೀಡಿರಲಿಲ್ಲ. ಕೆಲವು ಮಾದರಿ ಆದೇಶಗಳನ್ನು ಕೋರ್ಟ್‌ ಮುಂದಿರಿಸಿದ ಸರ್ಕಾರವು, ‘ಆದೇಶಗಳನ್ನು ಕಾಲಕಾಲಕ್ಕೆ ಮಾರ್ಪಾಡು ಮಾಡಲಾಗುತ್ತಿದೆ. ಹಾಗಾಗಿ ಅವುಗಳನ್ನು ಸಲ್ಲಿಸಲು ಆಗುತ್ತಿಲ್ಲ’ ಎಂದು ಹೇಳಿತ್ತು. ಈ ಆದೇಶಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಕೇಳುವಂತಿಲ್ಲ ಎಂಬ ರೀತಿಯಲ್ಲಿ ಸರ್ಕಾರ ನಡೆದುಕೊಂಡಿದ್ದು ಆಶ್ಚರ್ಯಕರ.

ಈಗ, ಅಷ್ಟೂ ಆದೇಶಗಳನ್ನು ಪ್ರಕಟಿಸಬೇಕು (ಲಭ್ಯವಾಗುವಂತೆ ಮಾಡಬೇಕು) ಎಂದು ಕೋರ್ಟ್‌ ಹೇಳಿದೆ. ಆದರೆ, ಈ ಆದೇಶಗಳನ್ನು ಹಾಜರುಪಡಿಸಲೇಬೇಕು ಎಂದು ಕೋರ್ಟ್‌ ವಿಚಾರಣೆಯ ಸಂದರ್ಭದಲ್ಲಿ ಏಕೆ ಒತ್ತಾಯಿಸಲಿಲ್ಲ?

ADVERTISEMENT

ಇಂಟರ್ನೆಟ್‌ ಮಾಧ್ಯಮದ ಮೂಲಕ ಆಗುವ ಅಭಿವ್ಯಕ್ತಿ ಹಾಗೂ ಈ ಮಾಧ್ಯಮ ಬಳಸಿ ನಡೆಸುವ ವೃತ್ತಿಯು ಸಂವಿಧಾನದ 19(1)(ಎ) ಮತ್ತು 19(1)(ಜಿ) ನೀಡಿರುವ (ಇವು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವೃತ್ತಿಯ ಸ್ವಾತಂತ್ರ್ಯಕ್ಕೆ ಸಂಬಂಧಿಸಿವೆ) ಹಕ್ಕುಗಳ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ನ್ಯಾಯಪೀಠ ಹೇಳಿದೆ. ಆದರೆ, ಇಂಟರ್ನೆಟ್‌ ಸೇವೆ ಪಡೆದುಕೊಳ್ಳುವುದೇ ಮೂಲಭೂತ ಹಕ್ಕು ಎಂದು ಹೇಳಿಲ್ಲ. ಆ ರೀತಿ ತೀರ್ಪು ನೀಡಬೇಕು ಎಂದು ಅರ್ಜಿದಾರರು ಕೇಳಿಲ್ಲದಿದ್ದರೂ, ಕೋರ್ಟ್‌ಗೆ ಆ ನೆಲೆಯಲ್ಲಿ ತೀರ್ಪು ನೀಡಲು ಅಧಿಕಾರವಿತ್ತು. ಆದರೆ, ಹಾಗೆ ತೀರ್ಪು ನೀಡದಿರುವುದು ಬೇಸರ ಮೂಡಿಸಿದೆ.

ಇಂದಿನ ಜೀವನದಲ್ಲಿ ಇಂಟರ್ನೆಟ್‌ ಎಲ್ಲದಕ್ಕೂ ಬೇಕು. ಶಿಕ್ಷಣ ಪಡೆಯಲು, ವಾಣಿಜ್ಯ ವಹಿವಾಟು ನಡೆಸಲು, ಸಾರಿಗೆ ಸೇವೆ ಪಡೆಯಲು, ಆರೋಗ್ಯ ಸೇವೆ ಪಡೆಯಲು ಸೇರಿದಂತೆ ದೈನಂದಿನ ಜೀವನದ ಹತ್ತು ಹಲವು ಕೆಲಸಗಳು ಇಂಟರ್ನೆಟ್ ಮೂಲಕವೇ ಆಗುವುದು. ಹೀಗಿರುವಾಗ, ಇಂಟರ್ನೆಟ್ ಸೇವೆ ಪಡೆಯುವುದು ಮೂಲಭೂತ ಹಕ್ಕು ಎಂದು ಘೋಷಿಸುವ ಅವಕಾಶವೊಂದನ್ನು ಸುಪ್ರೀಂ ಕೋರ್ಟ್‌ ತಪ್ಪಿಸಿಕೊಂಡಿತು.

ಈ ಪ್ರಕರಣದಲ್ಲಿ ಕಾನೂನಿನ ಹಲವು ಆಯಾಮಗಳನ್ನು ಪರಿಶೀಲಿಸಿರುವ ಕೋರ್ಟ್‌, ಇಂಟರ್ನೆಟ್‌ ಸೇವೆಗಳ ಮೇಲೆ ಅನಿರ್ದಿಷ್ಟ ಅವಧಿಗೆ ನಿರ್ಬಂಧ ವಿಧಿಸುವಂತಿಲ್ಲ ಎಂದು ಹೇಳಿದೆ. ಆದರೆ, ನಿರ್ದಿಷ್ಟ ಅವಧಿ ಏನು ಎಂಬುದನ್ನು ಇನ್ನಷ್ಟೇ ವ್ಯಾಖ್ಯಾನಿಸಬೇಕು.

ಕಾಶ್ಮೀರದಲ್ಲಿ ಇಂಟರ್ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಿದ ಸರ್ಕಾರಿ ಆದೇಶಗಳನ್ನು ಕೋರ್ಟ್‌ ಅಸಿಂಧುಗೊಳಿಸಬಹುದಿತ್ತು. ಆ ಆದೇಶಗಳನ್ನು ಅಸಿಂಧುಗೊಳಿಸದಿರುವಾಗ, ಇಂಟರ್ನೆಟ್‌ ಎಂಬುದು ಮೂಲಭೂತ ಹಕ್ಕುಗಳ ಒಂದು ಭಾಗ ಎಂದು ಹೇಳಿರುವುದರಲ್ಲಿ ಅರ್ಥವೇನಿದೆ? ಕಾಶ್ಮೀರದಲ್ಲಿ ಇಂಟರ್ನೆಟ್‌ ಸೇವೆ ಮತ್ತೆ ಆರಂಭವಾಗಬೇಕು ಎಂದೇನೂ ಕೋರ್ಟ್‌ ಹೇಳಿಲ್ಲ. ಆದರೆ, ಸರ್ಕಾರಕ್ಕೆ ತನ್ನ ತೀರ್ಮಾನವನ್ನು ಪುನರ್‌ ಪರಿಶೀಲಿಸಲು ಹೇಳಿದೆ.

ಲೇಖಕಿ: ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.