ADVERTISEMENT

ಮೋದಿ ಕುರಿತಾಗಿ ಗೂಗಲ್ ಎಐ ಟೂಲ್ ತಾರತಮ್ಯದ ಉತ್ತರ: ರಾಜೀವ್ ಚಂದ್ರಶೇಖರ್ ಕಿಡಿ

ಪಿಟಿಐ
Published 23 ಫೆಬ್ರುವರಿ 2024, 11:03 IST
Last Updated 23 ಫೆಬ್ರುವರಿ 2024, 11:03 IST
   

ನವದೆಹಲಿ: ಗೂಗಲ್‌ನ ಎಐ ವೇದಿಕೆ ‘ಜೆಮಿನಿ’ ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ತಾರತಮ್ಯದ, ಪೂರ್ವಾಗ್ರಹಪೀಡಿತ ಉತ್ತರ ನೀಡಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮಗಳ ಮತ್ತು ಕಾಯ್ದೆಯ ಇತರೆ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.

‘ಈಸ್‌ ಮೋದಿ ಎ ಫ್ಯಾಸಿಸ್ಟ್‌?’ ಎಂದು ಪ್ರಶ್ನೆ ಕೇಳಿದಾಗ ತಾರತಮ್ಯದ ಉತ್ತರ ಕೊಡುವ ಗೂಗಲ್‌ನ ಎಐ ಟೂಲ್ ಜೆಮಿನಿ, ಅದೇ ಪ್ರಶ್ನೆಗಳನ್ನು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಬಗ್ಗೆ ಕೇಳಿದಾಗ ಜಾಗರೂಕತೆಯ ಉತ್ತರ ನೀಡುತ್ತಿದೆ ಎಂದು ಪತ್ರಕರ್ತರೊಬ್ಬರು ತಮ್ಮ ವೆರಿಫೈಡ್‌ ಎಕ್ಸ್‌ ಖಾತೆಯಲ್ಲಿ ಮಾಡಿರುವ ಪೋಸ್ಟ್ ಬಗ್ಗೆ ರಾಜೀವ್ ಚಂದ್ರಶೇಖರ್ ಗಮನ ಸೆಳೆದಿದ್ದಾರೆ.

'ಇದು ಐಟಿ ಕಾಯಿದೆಯ ಮಧ್ಯಸ್ಥಿಕೆಗಾರರ ನಿಯಮಗಳ ನಿಯಮ 3(1)(ಬಿ)ನ ನೇರ ಉಲ್ಲಂಘನೆಯಾಗಿದೆ’ ಎಂದು ರಾಜೀವ್ ಚಂದ್ರಶೇಖರ್ ಎಕ್ಸ್‌ನಲ್ಲಿ ಆರೋಪಿಸಿದ್ದಾರೆ.

ADVERTISEMENT

ಈ ಕುರಿತಂತೆ ಗೂಗಲ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯಕ್ಕೆ ಟ್ಯಾಗ್ ಮಾಡಿರುವ ರಾಜೀವ್, ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಮೋದಿ ಬಗ್ಗೆ ಗೂಗಲ್ ಎಐ ಟೂಲ್ ಜೆಮಿನಿಯನ್ನು ಪ್ರಶ್ನಿಸಿರುವ ಮತ್ತು ಅದು ನೀಡಿದ ಉತ್ತರದ ಸ್ಕ್ರೀನ್ ಶಾಟ್ ಅನ್ನು ಪತ್ರಕರ್ತರು ಹಂಚಿಕೊಂಡಿದ್ದಾರೆ.

ಮೋದಿ ಬಗ್ಗೆ ಆಕ್ಷೇಪಾರ್ಹ ಉತ್ತರ ನೀಡಿರುವ ಎಐ, ಅದೇ ಪ್ರಶ್ನೆಗಳನ್ನು ಡೊನಾಲ್ಡ್ ಟ್ರಂಪ್ ಮತ್ತು ಝೆಲೆನ್‌ಸ್ಕಿ ಬಗ್ಗೆ ಕೇಳಿದಾಗ ಸ್ಪಷ್ಟ ಉತ್ತರ ನೀಡದೆ ನುಣುಚಿಕೊಳ್ಳುವ ಯತ್ನ ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ.

ಮೋದಿ ಅವರ ಬಗ್ಗೆ ಉತ್ತರಿಸುವಾಗ ಗೂಗಲ್‌ ಸಾಧನವು ತಾರತಮ್ಯದ ಧೋರಣೆ ತಳೆದಿದೆ ಎಂದು ಹಲವು ನೆಟ್ಟಿಗರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.