ಶ್ರೀನಗರ: ವಕ್ಫ್ ಕಾಯ್ದೆ ವಿಚಾರವಾಗಿ ಸತತ ಎರಡನೇ ದಿನವೂ ಜಮ್ಮು–ಕಾಶ್ಮೀರ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಕಾಯ್ದೆ ಕುರಿತು ಚರ್ಚೆಗೆ ಆಗ್ರಹಿಸಿ ಸ್ಪೀಕರ್ ವಿರುದ್ಧವೇ ಆಡಳಿತಾರೂಢ ಪಕ್ಷದ ಸದಸ್ಯರು ಹಾಗೂ ಪ್ರತಿಪಕ್ಷಗಳ ಶಾಸಕರು ಪ್ರತಿಭಟಿಸಿ, ಗದ್ದಲ ಸೃಷ್ಟಿಸಿದ ಪರಿಣಾಮ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಗಿದೆ.
ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರಶ್ನಾವಳಿ ಅವಧಿಗೂ ಅವಕಾಶ ನೀಡದೇ ಆಡಳಿತಾರೂಢ ಎನ್‌ಸಿ ಸದಸ್ಯರಾದ ಸಲ್ಮಾನ್ ಸಾಗರ್, ಸೇರಿದಂತೆ ಹಲವು ನಾಯಕರು ಹಾಗೂ ಪ್ರತಿಪಕ್ಷಗಳ ಶಾಸಕರು ಪ್ರತಿಭಟಿಸಿದ ಪರಿಣಾಮ 2 ಬಾರಿ ಕಲಾಪ ಮುಂದೂಡಲಾಗಿತ್ತು.
ಸದನ ಮತ್ತೆ ಸೇರುತ್ತಿದ್ದಂತೆಯೇ ವಿಪಕ್ಷಗಳ ಶಾಸಕರು ವಕ್ಫ್ ಕಾಯ್ದೆಯನ್ನು‘ ಕರಾಳ ಕಾಯ್ದೆ’ ಎಂದು ಬಣ್ಣಿಸಿ, ಮುಸ್ಲಿಂ ಬಾಹುಳ್ಯದ ಜಮ್ಮು–ಕಾಶ್ಮೀರ ವಿಧಾನಸಭೆಯಲ್ಲಿ ಕಾಯ್ದೆ ಕುರಿತ ಚರ್ಚೆ ಅಗತ್ಯವೆಂದೂ ಪ್ರತಿಪಾದಿಸಿದರು.
ಜತೆಗೆ ಸ್ಪೀಕರ್ ವಿರುದ್ಧ ಘೋಷಣೆ ಕೂಗುವ ರೀತಿ ಆಡಳಿತಾರೂಢ ಪಕ್ಷಗಳ ಶಾಸಕರು ನಾಟಕ ಮಾಡುತ್ತಿದ್ದಾರೆ. ಅವರಿಗೆ ಮುಸ್ಲಿಮರ ಹಕ್ಕುಗಳ ಬಗ್ಗೆ ಕಾಳಜಿ ಇದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಿ ಸ್ಪೀಕರ್‌ರನ್ನು ಬದಲಿಸಲಿ ಎಂದೂ ಆಗ್ರಹಿಸಿದರು.
ಏತನ್ಮಧ್ಯೆ, ಪಿಡಿಪಿ ಶಾಸಕ ವಹೀದ್ ಪರ್ರಾ ಅವರು ಸದನದ ಬಾವಿಗಿಳಿದು ವಕ್ಫ್ ಕಾಯ್ದೆ ವಿರುದ್ಧ ತಮ್ಮ ಪಕ್ಷ ರೂಪಿಸಿರುವ ನಿರ್ಣಯವನ್ನು ಅಂಗೀಕರಿಸುವಂತೆ ಆಗ್ರಹಿಸಿದ ಪರಿಣಾಮ ಗದ್ದಲ ಹೆಚ್ಚಾಯಿತು.
ಈ ಹಿನ್ನೆಲೆಯಲ್ಲಿ ವಹೀದ್‌ರನ್ನು ಸದನದಿಂದ ಹೊರಗಟ್ಟಲು ಮಾಷರ್ಲ್‌ಗಳಿಗೆ ಆದೇಶಿಸಿದ ಸ್ಪೀಕರ್, ‘ಸಂಸತ್ತಿನಲ್ಲಿ ಈಗಾಗಲೇ ಅಂಗೀಕಾರ ಪಡೆದಿರುವ ವಿಚಾರವನ್ನು ಅಳಿಸಲು ಸಾಧ್ಯವಿಲ್ಲ. ಹೀಗಾಗಿ ಯಾವುದೇ ಚರ್ಚೆಗೆ ಅವಕಾಶ ನೀಡಲಾಗದು’ ಎಂದು ಸ್ಪಷ್ಟಪಡಿಸಿ ದಿನದ ಮಟ್ಟಿಗೆ ಕಲಾಪ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.