ADVERTISEMENT

ಜಮ್ಮು–ಕಾಶ್ಮೀರ: ಭಯೋತ್ಪಾದಕ ಕೃತ್ಯಗಳ ತನಿಖೆಗೆ ಎಸ್‌ಐಎ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 7:49 IST
Last Updated 2 ನವೆಂಬರ್ 2021, 7:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ: ಉಗ್ರರ ಸಂಘಟನೆಗಳು ನಡೆಸುವ ದೊಡ್ಡ ಪ್ರಮಾಣದ ಕೃತ್ಯಗಳ ಕುರಿತು ತನಿಖೆ ನಡೆಸಲು ಜಮ್ಮು–ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸರ್ಕಾರ ‘ರಾಜ್ಯ ತನಿಖಾ ಸಂಸ್ಥೆ’ (ಎಸ್‌ಐಎ) ಸ್ಥಾಪಿಸಿದೆ.

ಎಸ್‌ಐಎ, ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮಾದರಿಯಲ್ಲಿಯೇ ತನಿಖೆ ನಡೆಸಲಿದ್ದು, ಜಮ್ಮು–ಕಾಶ್ಮೀರ ಸಿಐಡಿ ಮುಖ್ಯಸ್ಥರೇ ಎಸ್‌ಐಎ ನೇತೃತ್ವ ವಹಿಸುವರು ಎಂದು ಮೂಲಗಳು ಹೇಳಿವೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇತ್ತೀಚೆಗೆ ಕೈಗೊಂಡಿದ್ದ ಜಮ್ಮು–ಕಾಶ್ಮೀರ ಪ್ರವಾಸ ಮುಕ್ತಾಯಗೊಂಡ ಬೆನ್ನಲ್ಲೇ ನೂತನ ತನಿಖಾ ಸಂಸ್ಥೆ ಸ್ಥಾಪನೆಯಾಗಿರುವುದು ಗಮನಾರ್ಹ.

ADVERTISEMENT

ಎನ್‌ಐಎ ಹಾಗೂ ಇತರ ಕೇಂದ್ರೀಯ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಲು ಎಸ್‌ಐಎ ನೋಡಲ್‌ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುವುದು ಎಂದು ಜಮ್ಮು–ಕಾಶ್ಮೀರ ಗೃಹ ಇಲಾಖೆ ತಿಳಿಸಿದೆ.

ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿ ಎಸ್‌ಐಎ ಸ್ವಯಂ ಪ್ರೇರಿತವಾಗಿ ಎಫ್‌ಐಆರ್‌ ದಾಖಲಿಸುವ ಅಧಿಕಾರ ಹೊಂದಿದೆ. ತಮ್ಮ ವ್ಯಾಪ್ತಿಯಲ್ಲಿ ಸಂಭವಿಸುವ ಉಗ್ರರ ಕೃತ್ಯಗಳ ಕುರಿತು ದಾಖಲಿಸುವ ಪ್ರಕರಣಗಳ ಕುರಿತು ಎಲ್ಲ ಪೊಲೀಸ್‌ ಠಾಣೆಗಳು ಎಸ್‌ಐಎಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ತನಿಖೆ ಯಾವುದೇ ಹಂತದಲ್ಲಿದ್ದಾಗಲೂ ಪ್ರಕರಣವನ್ನು ಎಸ್‌ಐಎಗೆ ವಹಿಸುವ ಅಧಿಕಾರವನ್ನು ಜಮ್ಮು–ಕಾಶ್ಮೀರ ಡಿಜಿಪಿಗೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.