ಅಮರಾವತಿ: ಸಮಾಜದಲ್ಲಿ ದ್ವೇಷ ಮೂಡಿಸಿ, ಅಶಾಂತಿಗೆ ಕಾರಣವಾದ ಆರೋಪದಡಿ ತೆಲುಗು ನಟ, ಬರಹಗಾರ ಹಾಗೂ ನಿರ್ದೇಶಕ ಪೋಸಾನಿ ಕೃಷ್ಣ ಮುರಳಿ (66) ಅವರ ಬಂಧಿಸಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್ ಜಗನ್ ಮೋಹನ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಪೋಸಾನಿ ಅವರ ಪತ್ನಿ ಕುಸುಮಲತಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಜಗನ್, 'ನಾವೆಲ್ಲರೂ ನಿಮ್ಮೊಂದಿಗಿದ್ದೇವೆ. ನಿರಾಶೆಗೊಳ್ಳಬೇಡಿ. ದೇವರು ಕೂಡ ನೋಡುತ್ತಿದ್ದಾನೆ. ಈ ಕ್ರೂರ ಎನ್‌ಡಿಎ ಸರ್ಕಾರ ಕೊನೆಯವರೆಗೂ ಇರುವುದಿಲ್ಲ. ಧೈರ್ಯವಾಗಿರಿ' ಎಂದಿದ್ದಾರೆ.
ಅಲ್ಲದೇ ಪೋಸಾನಿ ಅವರಿಗೆ ಕಾನೂನು ನೆರವು ನೀಡುವುದಾಗಿ ಭರವಸೆ ನೀಡಿದ ಜಗನ್, ಈ ವಿಷಯವನ್ನು ಈಗಾಗಲೇ ಪಕ್ಷಕ್ಕೆ ಸೇರಿದ ಹಿರಿಯ ವಕೀಲರಿಗೆ ತಿಳಿಸಲಾಗಿದೆ ಎಂದೂ ಹೇಳಿದ್ದಾರೆ.
ಪೋಸಾನಿ ಅವರನ್ನು ಬಂಧಿಸಿದ್ದನ್ನು ವೈಎಸ್‌ಆರ್‌ಸಿಪಿ ಇತರ ನಾಯಕರೂ ಖಂಡಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ. ಹಾಗೂ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸೇಡಿನ ರಾಜಕೀಯದ ಹೀನಾಯ ಕೃತ್ಯ ಎಂದು ದೂರಿದ್ದಾರೆ.
ಟಿಡಿಪಿ ನೇತೃತ್ವದ ಎನ್‌ಡಿಎ ಸರ್ಕಾರವು ತನ್ನ ಭಿನ್ನಾಭಿಪ್ರಾಯವನ್ನು ಮರೆಮಾಚಲು, ಕಾನೂನಿನ ನಿಯಮವನ್ನು ದುರ್ಬಲಗೊಳಿಸಲು ಮತ್ತು ರಾಜ್ಯವನ್ನು ಅವ್ಯವಸ್ಥೆಗೆ ತಳ್ಳಲು ಪೊಲೀಸರನ್ನು ಬಳಸುತ್ತಿದೆ. ಇಂತಹ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳು ಸಾರ್ವಜನಿಕರ ವಿರುದ್ಧದ ಟೀಕೆಗೆ ಗುರಿಯಾಗುತ್ತವೆ ಎಂದು ಎಚ್ಚರಿಸಿರುವ ವೈಎಸ್‌ಆರ್‌ಸಿಪಿ ನಾಯಕರು ಪೊಲೀಸರು ರಾಜಕೀಯ ಸೇಡಿನ ಸಾಧನಗಳಾಗಬಾರದು ಎಂದು ಆಗ್ರಹಿಸಿದ್ದಾರೆ.
ಏತನ್ಮಧ್ಯೆ, ಸುದ್ದಿಗಾರರೊಂದಿಗೆ ಮಾತನಾಡಿದ ಪೋಸಾನಿಯವರ ಪತ್ನಿ ಕುಸುಮಾ ಲತಾ, ತಮ್ಮ ಪತಿಗೆ ನೀಡಲಾದ ಬಂಧನ ನೋಟಿಸ್‌ನಲ್ಲಿ ಫೆ. 27 ರ ಗುರುವಾರ ಬಂಧನ ದಿನಾಂಕವನ್ನು ನಮೂದಿಸಲಾಗಿದೆ. ಆದರೆ ಫೆಬ್ರವರಿ 26ರ ಬುಧವಾರ ರಾತ್ರಿ 8:45ಕ್ಕೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಆದರೆ ಬಂಧನಕ್ಕೆ ಕಾರಣವನ್ನು ಉಲ್ಲೇಖಿಸಲಿಲ್ಲ ಎಂದು ಆರೋಪಿಸಿದ್ದಾರೆ.
ಹೈದರಾಬಾದ್‌ನ ಯೆಲ್ಲಾರೆಡ್ಡಿಗುಡಾದ ನ್ಯೂ ಸೈನ್ಸ್ ಕಾಲೋನಿ ಬಳಿಯ ನಿವಾಸದಿಂದ ಪೋಸಾನಿ ಅವರನ್ನು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಅವರ ಪತ್ನಿಗೆ ನೀಡಿರುವ ಬಂಧನ ನೋಟಿಸ್ ಪ್ರಕಾರ, ಬಿಎನ್‌ಎಸ್ ಸೆಕ್ಷನ್ 196 (ಧರ್ಮ, ಜನಾಂಗ, ಭಾಷೆ ಅಥವಾ ಪ್ರದೇಶದ ಆಧಾರದಲ್ಲಿ ದ್ವೇಷ ಉತ್ತೇಜಿಸುವುದು) 353 (2) ಸಾರ್ವಜನಿಕ ಅಶಾಂತಿಗೆ ಕಾರಣವಾಗುವ ಸುಳ್ಳು ಮಾಹಿತಿಯನ್ನು ಹರಡುವುದು ಮತ್ತು ಬಿಎನ್‌ಎಸ್ಎಸ್‌ನ ಸೆಕ್ಷನ್ 47(1) ಮತ್ತು (2) ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ.
ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿಯೊಂದಿಗೆ ಗುರುತಿಸಿಕೊಂಡಿದ್ದ ಪೋಸಾನಿ ಅವರು ಹಿಂದಿನ ಆಡಳಿತದಲ್ಲಿ(ಜಗನ್ ಸರ್ಕಾರ) ಆಂಧ್ರಪ್ರದೇಶ ಚಲನಚಿತ್ರ, ಟಿವಿ ಮತ್ತು ರಂಗಭೂಮಿ ಅಭಿವೃದ್ಧಿ ನಿಗಮದ (ಎಪಿಎಫ್‌ಟಿಟಿಡಿಸಿ) ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.