ADVERTISEMENT

ಜಲಗಾಂವ್‌ ದುರಂತ; ಮೃತರ ಸಂಖ್ಯೆ 13ಕ್ಕೆ ಏರಿಕೆ

8 ಮೃತದೇಹಗಳ ಗುರುತು ಪತ್ತೆ; ಪೊಲೀಸರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 15:22 IST
Last Updated 23 ಜನವರಿ 2025, 15:22 IST
ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ರೈಲು ದುರಂತದಲ್ಲಿ ಸಂಭವಿಸಿದ ಸ್ಥಳದಲ್ಲಿ ಗುರುವಾರ ಪೊಲೀಸರು ಶ್ವಾನ ಪಡೆಗಳ ಜೊತೆ ಪರಿಶೀಲನೆ ನಡೆಸಿದರು–ಪಿಟಿಐ ಚಿತ್ರ 
ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ರೈಲು ದುರಂತದಲ್ಲಿ ಸಂಭವಿಸಿದ ಸ್ಥಳದಲ್ಲಿ ಗುರುವಾರ ಪೊಲೀಸರು ಶ್ವಾನ ಪಡೆಗಳ ಜೊತೆ ಪರಿಶೀಲನೆ ನಡೆಸಿದರು–ಪಿಟಿಐ ಚಿತ್ರ    

ಜಲಗಾಂವ್‌, ಮಹಾರಾಷ್ಟ್ರ: ಜಲಗಾಂವ್‌ನಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ರೈಲ್ವೆ ಹಳಿಯಲ್ಲಿ ರುಂಡವಿಲ್ಲದ ದೇಹಗಳು ಪತ್ತೆಯಾಗಿವೆ.

ಬುಧವಾರ ಮುಂಬೈಗೆ ತೆರಳುತ್ತಿದ್ದ ಲಖನೌ–ಮುಂಬೈ ಪುಷ್ಪಕ್‌ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹಬ್ಬುತ್ತಿದ್ದಂತೆಯೇ, ಚೈನ್‌ ಎಳೆಯಲಾಗಿತ್ತು. ಈ ವೇಳೆ ಅದರಲ್ಲಿದ್ದ ಹಲವರು ರೈಲಿನಿಂದ ಜಿಗಿದು ಓಡತೊಡಗಿದರು. ಇದೇ ವೇಳೆಗೆ ಮತ್ತೊಂದು ಹಳಿಯಲ್ಲಿ ಸಂಚರಿಸುತ್ತಿದ್ದ ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲಿಗೆ ಸಿಲುಕಿ ಮೃತಪಟ್ಟಿದ್ದರು.

‘ಮೃತಪಟ್ಟ 13 ಮಂದಿ ಪೈಕಿ 8 ಮಂದಿಯ ಮೃತದೇಹವನ್ನು ಗುರುತಿಸಲಾಗಿದೆ. ಆಧಾರ್‌ ಕಾರ್ಡ್‌ ಆಧರಿಸಿ, ಇಬ್ಬರ ದೇಹಗಳನ್ನು ಗುರುತಿಸಲಾಗಿದೆ’ ಎಂದು ಐಜಿಪಿ ದತ್ತಾತ್ರೇಯ ಕರಾಳೆ ತಿಳಿಸಿದ್ದಾರೆ.

ADVERTISEMENT

‘ಮೃತರಲ್ಲಿ 7 ಮಂದಿ ನೇಪಾಳಕ್ಕೆ ಸೇರಿದವರು’ ಎಂದು ಜಲಗಾಂವ್‌ ಜಿಲ್ಲಾ ಮಾಹಿತಿ ಅಧಿಕಾರಿ ಯುವರಾಜ್‌ ಪಾಟೀಲ್‌ ತಿಳಿಸಿದರು.

‘ಗಾಯಗೊಂಡ 15 ಮಂದಿ ಪೈಕಿ 10 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಮಂದಿಯನ್ನು ಪಚೋರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರನ್ನು ಜಲಗಾಂವ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಸಣ್ಣ ಪುಟ್ಟ ಗಾಯಗೊಂಡವರನ್ನು ಆಸ್ಪ‍ತ್ರೆಯಿಂದ ಬಿಡುಗಡೆಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಲಖನೌ– ಮುಂಬೈ ಪುಷ್ಪಕ್‌ ಎಕ್ಸ್‌ಪ್ರೆಸ್‌ ರೈಲು ಬುಧವಾರ ರಾತ್ರಿ 1.20ರ ವೇಳೆಗೆ ಪ್ರಯಾಣದ ಕೊನೆಯ ನಿಲ್ದಾಣವಾದ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಲ್‌ಗೆ ಬಂದು ತಲುಪಿತು’ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದರು.

₹6.5 ಲಕ್ಷ ನೆರವು: ದಾವೊಸ್‌ನಲ್ಲಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಘಟನೆ ಕುರಿತಂತೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

‘ದುರಂತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ರಾಜ್ಯ ಸರ್ಕಾರವು ₹5 ಲಕ್ಷ ಪರಿಹಾರ ನೀಡಲಿದೆ’ ಎಂದು ಘೋಷಿಸಿದರು. ರೈಲ್ವೆ ಬೋರ್ಡ್ ಪ್ರತ್ಯೇಕವಾಗಿ ₹1.5 ಲಕ್ಷ ಪರಿಹಾರ ಘೋಷಿಸಿದ್ದು, ತೀವ್ರವಾಗಿ ಗಾಯಗೊಂಡವರಿಗೆ ₹50 ಸಾವಿರ, ಸಣ್ಣ ಪುಟ್ಟ ಗಾಯಗೊಂಡವರಿಗೆ ₹5 ಸಾವಿರ ಪರಿಹಾರ ನೀಡಿದೆ. 

ದುರಂತದಲ್ಲಿ ಗಾಯಗೊಂಡವರನ್ನು ಜಲಗಾಂವ್‌ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ–ಪಿಟಿಐ ಚಿತ್ರ

ವದಂತಿ ಹಬ್ಬಿಸಿದ್ದು ಚಹಾ ಮಾರಾಟಗಾರ–ಪವಾರ್

ಪುಣೆ: ‘ಪುಷ್ಪಕ್‌ ಎಕ್ಸ್‌ಪ್ರೆಸ್‌’ನ ಒಳಗಡೆ ಚಹಾ ಮಾರುತ್ತಿದ್ದ ವ್ಯಕ್ತಿಯೇ ಬೆಂಕಿ ಹರಡಿದ್ದ ವದಂತಿ ಹಬ್ಬಿಸಿದ್ದರಿಂದ, ಕೆಲವು ಪ್ರಯಾಣಿಕರು ರೈಲಿನಿಂದ ಕೆಳಗಿಳಿದು ಓಡಿದ್ದರಿಂದ ಅನಾಹುತ ಸಂಭವಿಸಿದೆ’ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ತಿಳಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು,‘ರೈಲಿನ ಅಡುಗೆ ತಯಾರಿಕಾ ಬೋಗಿಯಲ್ಲಿದ್ದ ಚಹಾ ಮಾರುತ್ತಿದ್ದ ವ್ಯಕ್ತಿಯೇ ಬೆಂಕಿ ಹರಡಿದ ಕುರಿತು ಜೋರಾಗಿ ಕಿರುಚಿದ್ದ. ಇದನ್ನು ಕೇಳಿಸಿಕೊಂಡು ಉತ್ತರ ಪ್ರದೇಶದ ಶ್ರಾವಸ್ತಿಯ ಇಬ್ಬರು ಪ್ರಯಾಣಿಕರು ಚೈನ್‌ ಎಳೆದಿದ್ದರು. ಸಾಮಾನ್ಯ ವರ್ಗದ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದವರು ಆತಂಕಗೊಂಡು ಏಕಾಏಕಿ ರೈಲಿನಿಂದ ಇಳಿದು ಓಡಿದ್ದರಿಂದ ಈ ಅನಾಹುತ ಸಂಭವಿಸಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.