ADVERTISEMENT

ಜಮ್ಮು ಮತ್ತು ಕಾಶ್ಮೀರ: 10 ಸಾವಿರ ಯೋಧರು ವಾಪಸ್‌ –ಗೃಹ ಸಚಿವಾಲಯ

ಪಿಟಿಐ
Published 20 ಆಗಸ್ಟ್ 2020, 1:36 IST
Last Updated 20 ಆಗಸ್ಟ್ 2020, 1:36 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ:ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಿಸಿರುವ ಸುಮಾರು 10,000 ಅರೆಸೇನಾಪಡೆ ಯೋಧರನ್ನು ತಕ್ಷಣವೇ ಹಿಂದಕ್ಕೆ ಕರೆಸಿಕೊಳ್ಳುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಬುಧವಾರ ಸಂಜೆ ಕೇಂದ್ರ ಗೃಹ ಸಚಿವಾಲಯ ಈ ಆದೇಶ ಹೊರಡಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಎಪಿಎಫ್)‌ 100 ತುಕಡಿಗಳು ತಮ್ಮ ಮೂಲ ನೆಲೆಗೆ ಮರಳುವಂತೆ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ.

2019ರ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಬಳಿಕ ಕಣಿವೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹಾಗೂ ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ಅಲ್ಲಿ ಬಾರೀ ಸಂಖ್ಯೆಯಲ್ಲಿ ಅರೆ ಸೇನಾಪಡೆಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿತ್ತು.

ADVERTISEMENT

ವಿವಿಧ ಅರೆ ಸೇನಾಪಡೆಗಳಿಗೆ ಸುಮಾರು 10 ಸಾವಿರ ಸಿಬ್ಬಂದಿಗಳು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಿಗೆ ತೆರಳುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಸಿಆರ್‌ಪಿಎಫ್‌, ಬಿಎಸ್‌ಎಫ್‌, ಆಸ್ಸಾಂ ರೈಫಲ್ಸ್‌, ಸಶಸ್ತ್ರ ಸೀಮಾಬಲ, ಸಿಐಎಸ್‌ಎಫ್‌ ಸೇರಿದಂತೆ ವಿವಿಧ ಪ್ಯಾರಾಮಿಲಿಟರಿ ಪಡೆಗಳಿಗೆ ಸೇರಿದ ನಾನಾ ಬೆಟಾಲಿಯನ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ 10 ಸಾವಿರ ಸಿಬ್ಬಂದಿ ಕಣಿವೆ ರಾಜ್ಯದಿಂದ ವಾಪಸ್ಸಾಗಲ್ಲಿದ್ದಾರೆ.

ಸಿಆರ್‌ಪಿಎಫ್‌ (40 ತುಕಡಿ), ಎಸ್‌ಎಸ್‌ಬಿ, ಸಿಐಎಸ್‌ಎಫ್‌ ಮತ್ತು ಬಿಎಸ್‌ಎಫ್‌ನ ತಲಾ 20 ತುಕಡಿಗಳನ್ನು ವಾರದೊಳಗೆ ವಾಪಸ್‌ ಕರೆಸಿಕೊಳ್ಳಲು ನಿರ್ದೇಶಿಸಲಾಗಿದೆ

ಈ ಆದೇಶ ತಕ್ಷಣದಿಂದಲೇ ಜಾರಿಯಾಗಿದ್ದರಿಂದ ಕೆಲವು ಬೆಟಾಲಿಯನ್‌ಗಳು ಸಂಜೆಯೇ ತೆರಳಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿ, ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.