ADVERTISEMENT

ಪ್ರಧಾನಿ ಮೋದಿ ಜತೆ ಮುಖಂಡರ ಸಭೆ ಇಂದು

ಕಾಶ್ಮೀರದಲ್ಲಿ ರಾಜಕೀಯ ಚಟುವಟಿಕೆಗೆ ಚಾಲನೆ

ಪಿಟಿಐ
Published 23 ಜೂನ್ 2021, 18:47 IST
Last Updated 23 ಜೂನ್ 2021, 18:47 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಸುಮಾರು ಎರಡು ವರ್ಷಗಳ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅಲ್ಲಿನ 14 ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಲಿದ್ದಾರೆ.

ಮಾತುಕತೆಯ ಕಾರ್ಯಸೂಚಿ ಏನೆಂಬುದು ಪ್ರಕಟವಾಗದಿದ್ದರೂ, ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗಳನ್ನು ಪುನಃ ಆರಂಭಿಸುವ ವಿಚಾರ ವಾಗಿಯೇ ಚರ್ಚೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಧಾನಿ ಜತೆಗಿನ ಸಭೆಯಲ್ಲಿ ಯಾವ ಬೇಡಿಕೆಗಳನ್ನು ಇಡಬೇಕು ಎಂಬ ತೀರ್ಮಾನ ಕೈಗೊಳ್ಳಲು ರಾಜ್ಯದ ಪ್ರಮುಖ ಎಂಟು ಪಕ್ಷಗಳ ಗುಪ್ಕಾರ್‌ ಕೂಟವು ಮಂಗಳವಾರ ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಅವರ ನಿವಾಸದಲ್ಲಿ ಸಭೆ ನಡೆಸಿತ್ತು. ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರು ಸ್ಥಾಪಿಸಲು ಪ್ರಧಾನಿಯನ್ನು ಒತ್ತಾಯಿಸಲು ಕೂಟ ತೀರ್ಮಾನಿಸಿದೆ.

ADVERTISEMENT

ಫಾರೂಕ್‌ ಅಬ್ದುಲ್ಲಾ ಅವರು ಬುಧವಾರ ನ್ಯಾಷನಲ್‌ ಕಾನ್ಫರೆನ್ಸ್‌ನ ಮುಖಂಡರ ಸಭೆಯನ್ನು ಪ್ರತ್ಯೇಕವಾಗಿ ಆಯೋಜಿಸಿದ್ದಾರೆ. ಜಮ್ಮು– ಕಾಶ್ಮೀರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.

ಪ್ರಧಾನಿಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ 14 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಬುಧ ವಾರವೇ ದೆಹಲಿಯನ್ನು ತಲುಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.