ಜಮ್ಮು ಪ್ರವಾಹ
ಶ್ರೀನಗರ: ಜಮ್ಮು ಪ್ರದೇಶದಲ್ಲಿ ಪ್ರವಾಹಕ್ಕೆ ತುತ್ತಾಗಿರುವ ನದಿಗಳ ತೀರ ಹಾಗೂ ತಗ್ಗು ಪ್ರದೇಶಗಳಿಂದ ಸುಮಾರು 5,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ಜಮ್ಮು ಹಾಗೂ ಸಾಂಬಾ ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ ಸಿಲುಕಿದವರ ರಕ್ಷಣೆ ಮಾಡುವ ಕೆಲಸವನ್ನು ಎನ್‌ಡಿಆರ್‌ಎಫ್ ತಂಡದವರು ಮಾಡುತ್ತಿದ್ದಾರೆ ಎಂದು ಜಿಲ್ಲಾ ಆಡಳಿತ ತಿಳಿಸಿದೆ.
ಭಾರೀ ಮಳೆಯಿಂದ ಉಂಟಾದ ಪ್ರವಾಹದಿಂದ ಜಮ್ಮು ಪ್ರದೇಶ ಜಲಾವೃತಗೊಂಡಿದೆ. ಮಳೆಯು ಕಡಿಮೆ ಪ್ರಮಾಣದಲ್ಲಿ ಸುರಿಯುತ್ತಿದ್ದು ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕುಡಿಯುವ ನೀರು, ವಿದ್ಯುತ್, ಇಂಟರ್ನೆಟ್ ಸೇವೆಗಳ ಪುನರ್ ಸ್ಥಾಪನೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಮ್ಮುವಿನಲ್ಲಿ ಕಳೆದ 24 ಗಂಟೆಯಲ್ಲಿ 380 ಮಿ.ಮೀ. ಮಳೆಯಾಗಿದೆ. 1910ರಲ್ಲಿ ಇಷ್ಟು ಪ್ರಮಾಣದ ಮಳೆ ಸುರಿದಿತ್ತು ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ನದಿ ತೀರ ಹಾಗೂ ತಗ್ಗು ಪ್ರದೇಶಗಳಿಂದ 5,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸೇನಾ ಯೋಧರು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.
ಪೀರ್‌ಖೋ, ಗುಜ್ಜರ್‌ನಗರ, ಆರ್‌ಎಸ್ ಪುರ, ನಿಕ್ಕಿನಗರ, ತಾವಿ ಪ್ರದೇಶ, ಗೂರ್ಕನಗರ, ಖಾಸಿಂನಗರ, ರಾಜೀವ್ ನಗರ, ಶೇರ್-ಇ-ಕಾಶ್ಮೀರ್ ವಿಶ್ವವಿದ್ಯಾಲಯ, ಅಖನೂರ್, ಪರ್ಗ್ವಾಲ್ ಪ್ರದೇಶಗಳು ಜಲಾವೃತ್ತಗೊಂಡಿವೆ.
ವಿಭಾಗೀಯ ಆಯುಕ್ತ ರಾಮೇಶ್ ಕುಮಾರ್ ತಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ರಕ್ಷಣಾ ಕಾರ್ಯ ಚುರುಕುಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.