ಜಮ್ಮು: ಜಮ್ಮು ಗಡಿ ಪ್ರದೇಶದಲ್ಲಿ ಬೆದರಿಕೆ ಪತ್ರ ಹೊತ್ತೊಯ್ಯುತ್ತಿದ್ದ ಪಾರಿವಾಳವನ್ನು ಭದ್ರತಾ ಪಡೆಯ ಸಿಬ್ಬಂದಿ ಹಿಡಿದಿದ್ದಾರೆ. ‘ಜಮ್ಮು ರೈಲು ನಿಲ್ದಾಣವನ್ನು ಸ್ಫೋಟಿಸುತ್ತೇವೆ’ ಎಂಬ ಬೆದರಿಕೆಯ ಒಕ್ಕಣೆ ಆ ಪತ್ರದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 18ರ ರಾತ್ರಿ ಸುಮಾರು 9 ಗಂಟೆಗೆ ಪಾಕಿಸ್ತಾನದಿಂದ ಹಾರಿಬಂದ ಪಾರಿವಾಳವನ್ನು ಅಂತರರಾಷ್ಟ್ರೀಯ ಗಡಿ ಪ್ರದೇಶವಾದ ಕಟಾರಿಯಾ ಬಳಿ ಸೆರೆಹಿಡಿಯಲಾಗಿದೆ. ಬೆದರಿಕೆ ಪತ್ರವನ್ನು ಪಾರಿವಾಳದ ಉಗುರಿಗೆ ಕಟ್ಟಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಬರೆಯಲಾದ ಈ ಬೆದರಿಕೆ ಪತ್ರದಲ್ಲಿ ‘ಕಾಶ್ಮೀರ ಸ್ವಾತಂತ್ರ್ಯ’ ಮತ್ತು ‘ಕಾಲ ಕೂಡಿಬಂದಿದೆ’ ಎಂಬ ಅರ್ಥದ ಸಾಲುಗಳು ಸಹ ಇದ್ದವು ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನವು ಬಲೂನ್, ಧ್ವಜ ಮತ್ತು ಪಾರಿವಾಳಗಳ ಮೂಲಕ ಭಾರತದ ಗಡಿ ಪ್ರದೇಶಗಳಲ್ಲಿ ಅನೇಕ ಸಂದೇಶಗಳನ್ನು ಕಳುಹಿಸುತ್ತಿತ್ತು. ಆದರೆ, ಬೆದರಿಕೆ ಪತ್ರ ಹೊತ್ತೊಯ್ಯುತ್ತಿದ್ದ ಪಾರಿವಾಳವನ್ನು ಇದೇ ಮೊದಲ ಬಾರಿಗೆ ಸೆರೆಹಿಡಿಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇಶದ ರಕ್ಷಣೆಯ ದೃಷ್ಟಿಯಿಂದಾಗಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ ಮತ್ತು ರೈಲು ನಿಲ್ದಾಣದಲ್ಲಿ ಹೆಚ್ಚು ಭದ್ರತೆ ಕಲ್ಪಿಸಿದ್ದು, ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.