ADVERTISEMENT

ಸ್ವಾತಂತ್ರ್ಯೋತ್ಸವಕ್ಕೆ ಸ್ಫೋಟದ ಸಂಚು: ನಾಲ್ವರು ಉಗ್ರರ ಬಂಧನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 14:00 IST
Last Updated 14 ಆಗಸ್ಟ್ 2021, 14:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ (ಪಿಟಿಐ): ಸ್ವಾತಂತ್ರ್ಯ ದಿನಾಚರಣೆ ದಿನದಂದು ದಾಳಿಗೆ ಸಂಚು ರೂಪಿಸಿದ್ದ ಪಾಕ್‌ ಮೂಲದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ನಾಲ್ವರು ಭಯೋತ್ಪಾದಕರನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತ ಉಗ್ರರಲ್ಲಿ ಉತ್ತರಪ್ರದೇಶದ ಒಬ್ಬ ನಿವಾಸಿಯೂ ಇದ್ದಾನೆ. ಸ್ವಾತಂತ್ರ್ಯ ದಿನಾಚರಣೆಯಂದು ಜಮ್ಮುವಿನಲ್ಲಿ ವಾಹನದಲ್ಲಿ ಐಇಡಿ ಇಟ್ಟು ಸ್ಫೋಟಿಸಲು ಮತ್ತು ದೇಶದ ಇತರೆಡೆ ದಾಳಿ ನಡೆಸಲು ಸಂಚು ರೂಪಿಸಿದ್ದರು. ಅಲ್ಲದೇ, ಡ್ರೋನ್‌ ಮೂಲಕ ಬರುವಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಕಾಶ್ಮೀರದಲ್ಲಿರುವ ಜೆಇಎಂ ಉಗ್ರರಿಗೆ ರವಾನಿಸುತ್ತಿದ್ದರು ಎಂದು ಪೊಲೀಸ್‌ ವಕ್ತಾರರು ತಿಳಿಸಿದ್ದಾರೆ.

ಜೆಇಎಂ ಉಗ್ರ ಸಂಘಟನೆಯ ಸದಸ್ಯ ಮುಂಟಾಜೀರ್ ಮಂಜೂರ್ ಅಲಿಯಾಸ್ ಸೈಫುಲ್ಲಾನನ್ನು ಪ್ರಿಚೂ ಪುಲ್ವಾಮಾದಲ್ಲಿ ಮೊದಲು ಬಂಧಿಸಲಾಯಿತು. ಆತನಿಂದ ಒಂದು ಪಿಸ್ತೂಲ್, ಒಂದು ಪತ್ರಿಕೆ, ಎಂಟು ಜೀವಂತ ಗುಂಡುಗಳು, ಎರಡು ಚೀನಿ ಹ್ಯಾಂಡ್ ಗ್ರೆನೇಡ್‌ಗಳನ್ನು ಹಾಗೂ ಕಾಶ್ಮೀರಕ್ಕೆ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಉಗ್ರರು ಬಳಸುತ್ತಿದ್ದ ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ADVERTISEMENT

ನಂತರ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕಂದಾಲದ ಮಿರ್ದನ್ ಮೊಹಲ್ಲಾದ ಇಜಹಾರ್ ಖಾನ್ ಅಲಿಯಾಸ್ ಸೋನು ಖಾನ್ ಸೇರಿ ಇನ್ನೂ ಮೂವರು ಭಯೋತ್ಪಾದಕರನ್ನು ಬಂಧಿಸಲಾಯಿತು ಎಂದು ವಕ್ತಾರರು ತಿಳಿಸಿದ್ದಾರೆ.

ಖಾನ್ ಪಾಣಿಪತ್ ತೈಲ ಸಂಸ್ಕರಣಾಗಾರದ ವೀಡಿಯೊಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದ. ನಂತರ ಆತನಿಗೆ ಅಯೋಧ್ಯೆ ರಾಮ ಜನ್ಮಭೂಮಿಯ ವಿಡಿಯೊ ಕಳುಹಿಸುವ ಕೆಲಸವನ್ನು ಪಾಕ್‌ನಲ್ಲಿರುವ ಜೆಇಎಂ ಕಮಾಂಡರ್‌ಮುನಜೀರ್ ಅಲಿಯಾಸ್ ಶಾಹಿದ್ ಎಂಬಾತ ವಹಿಸಿದ್ದ. ಆ ಕಾರ್ಯ ಸಾಧಿಸುವ ಮೊದಲು ಈ ಉಗ್ರರನ್ನು ಬಂಧಿಸಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.