
ನವದೆಹಲಿ: ‘ಇಂಡಿಯಾ ಗೇಟ್ ಬಳಿ ಮಾಲಿನ್ಯ ವಿರೋಧಿ ಪ್ರತಿಭಟನೆ ಸಂಘಟಿಸಲು ನೆರವು ನೀಡಲಾಗಿದೆ ಮತ್ತು ಈ ಪ್ರತಿಭಟನೆಯಲ್ಲಿ ಮಾವೋವಾದಿ ಪರ ಘೋಷಣೆಗಳನ್ನು ಕೂಗಲಾಗಿದೆ’ ಎಂಬ ದೆಹಲಿ ಪೊಲೀಸರ ಆರೋಪವನ್ನು ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ(ಜೆಎನ್‌ಯು–ಎಸ್‌ಯು) ಅಲ್ಲಗಳೆದಿದೆ.
ಎಫ್‌ಐಆರ್‌ನಲ್ಲಿರುವ ಆರೋಪಗಳು ಸುಳ್ಳು ಮತ್ತು ದುರುದ್ದೇಶಪೂರಿತ ಎಂದು ವಿದ್ಯಾರ್ಥಿ ಸಂಘ ಹೇಳಿದೆ. ನ.23ರಂದು ಇಂಡಿಯಾ ಗೇಟ್ ಬಳಿ ನಡೆದ ಪ್ರತಿಭಟನೆಯ ಆಯೋಜಕರು ನಾವಲ್ಲ, ಇದರಲ್ಲಿ ನಾವು ಭಾಗವಹಿಸಿಲ್ಲ’ ಎಂದು ದೆಹಲಿ ಪೊಲೀಸರಿಗೆ ಹಲವು ಬಾರಿ ಹೇಳಿದ್ದೇವೆ. ಆದರೆ, ಎಫ್‌ಐಆರ್‌ನಲ್ಲಿ ವಿದ್ಯಾರ್ಥಿ ಒಕ್ಕೂಟವನ್ನು ಸೇರ್ಪಡೆ ಮಾಡಿರುವ ಪೊಲೀಸರ ನಡೆಯ ಬಗ್ಗೆ ಅನುಮಾನ ಮೂಡುತ್ತಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಪ್ರತಿಭಟನೆ ವೇಳೆ ‘ಮಾಡವಿ ಹಿಡ್ಮಾ ಅಮರ್ ರಹೇ‘ ಹಿಡ್ಮಾಗೆ ಲಾಲ್ ಸಲಾಂ’ ಎಂಬ ಘೋಷಣೆಗಳನ್ನು ಕೂಗಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 22 ಜನರನ್ನು ಬಂಧಿಸಿದ್ದಾರೆ.
ಹಿಡ್ಮಾ ಪರ ಘೋಷಣೆ ಕೂಗಿದ್ದು ಹಿಮಖಂಡ್ ಮತ್ತು ಭಗತ್‌ಸಿಂಗ್ ಛಾತ್ರಾ ಏಕ್ತಾ ಮಂಚ್ ಎಂದು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಎಸ್‌ಎಫ್‌ಎಸ್’ ಸಂಘಟನೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.